ಶಾಸಕರಾಗಲಿ ಎಂದು ಹರಕೆ ಹೊತ್ತರು, ಹಳ್ಳಿಹಳ್ಳಿಗಳಲ್ಲಿ ಅಭಿಷೇಕ ನೆರವೇರಿಸಿದರು, ಬೃಹತ್ ಪಾದಯಾತ್ರೆ ಹಮ್ಮಿಕೊಂಡರು….ಯಾರೇ ನೀ ಅಭಿಮಾನಿ?
ಸರಕಾರ್ ನ್ಯೂಸ್ ಇಂಡಿ
ತಮ್ಮ ನೆಚ್ಚಿನ ನಾಯಕ ಶಾಸಕನಾಗಬೇಕೆಂದು ದಿನ ನಿತ್ಯ ಪ್ರಾರ್ಥಿಸುವ ಅಸಂಖ್ಯ ಅಭಿಮಾನಿಗಳು ಇದೀಗ ಹಳ್ಳಿ ಹಳ್ಳಿಗಳಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಹೌದು, ಭೀಮಾತೀರ ಖ್ಯಾತಿಯ ಇಂಡಿ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಶಾಸಕನಾಗಬೇಕೆಂದು ಅವರ ಅಸಂಖ್ಯ ಅಭಿಮಾನಿಗಳು ಗುರುವಾರ ಒಂದೇ ದಿನ ಎಲ್ಲ ಹಳ್ಳಿಗಳಲ್ಲಿ ಏಕಕಾಲಕ್ಕೆ ಪವನ ಸುತ ಆಂಜನೇಯನ ಪೂಜೆ ನೆರವೇರಿಸಿದ್ದಾರೆ.
ಕ್ಷೇತ್ರದ ಒಟ್ಟು 92 ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ದಯಾಸಾಗರ ಪಾಟೀಲರಿಗೆ ಜನರ ಕಷ್ಟ ಸುಖಗಗಳಲ್ಲಿ ಭಾಗಿಯಾಗುವ ಶಕ್ತಿ, ಸಾಮರ್ಥ್ಯ ಮತ್ತಷ್ಟು ದಯಪಾಲಿಸು, ಅವರು ಶಾಸಕರಾಗಿ ಜನಸೇವೆ ಮಾಡುವಂತೆ ಆಶೀರ್ವದಿಸಬೇಕೆಂದು ಪ್ರಾರ್ಥಿಸಿದರು. ಕೆಲವೆಡೆ ಜಲಾಭಿಷೇಕ ನೆರವೇರಿಸಿ ತಮ್ಮ ನೆಚ್ಚಿನ ನಾಯಕನಿಗೆ ಒಳಿತಾಗಲಿ ಎಂದು ಬೇಡಿಕೊಂಡರು.
ಇನ್ನು ಕೆಲವೆಡೆ ಆಂಜನೇಯ ದೇವಸ್ಥಾನಗಳಿಲ್ಲದ ಗ್ರಾಮಗಳಲ್ಲಿ ಆ ಗ್ರಾಮದ ಅಧಿದೇವತೆಗೆ ಪೂಜೆ ನೆರವೇರಿಸಲಾಯಿತು. ತಾಂಡಾಗಳಲ್ಲಿ ಸೇವಾಲಾಲ ಗುಡಿಯಲ್ಲಿ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸಲಾಯಿತು.
50ನೇ ಜನ್ಮ ದಿನ ಆಚರಣೆ:
ದಯಾಸಾಗರ ಪಾಟೀಲ ಅವರ 50ನೇ ಜನ್ಮ ದಿನದಂಗವಾಗಿ ಶುಕ್ರವಾರ ಇಂಡಿ ಪಟ್ಟಣದಲ್ಲಿಸರ್ವ ಸಮಾಜದರೆಲ್ಲ ಸೇರಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮಹಾವೀರ ವೃತ್ತದಿಂದ ಬಸವೇಶ್ವರ ವೃತ್ತ ಅಲ್ಲಿಂದ ಲಚ್ಯಾಣ ರಸ್ತೆಯ ದ್ವಾರಬಾಗಿಲ ಮೂಲಕ ಅಂಚೆ ಇಲಾಖೆ ಮಾರ್ಗವಾಗಿ ಶಾಂತೇಶ್ವರ ದೇವಸ್ಥಾನ ತಲುಪಲಿದೆ. ಅಂದಾಜು 2000 ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.
ಆಶೀರ್ವಾದ ಆಂಜನೇಯ ನೆನಪು:
ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭ ಇದೇ ಅಭಿಮಾನಿಗಳು “ಆಶೀರ್ವಾದ ಆಂಜನೇಯ” ಆಂಜನೇಯ ಯಾತ್ರೆಯ ಮೂಲಕ ಇಂಡಿ ವಿಧಾನ ಸಭೆ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದಿದ್ದರು. ಆಯಾ ಗ್ರಾಮಗಳ ಯುವಕರು ಯಾತ್ರೆಗೆ ಸಾಥ್ ನೀಡಿದ್ದರು. ಆಗೆಲ್ಲ ಗ್ರಾಮಸ್ಥರು ಸಹ ಆಂಜನೇಯ ಶಕ್ತಿ ದೇವರು. ಆತನ ಆಶೀರ್ವಾದ ತಮ್ಮ ಹಾಗೂ ತಮ್ಮ ನಾಯಕ ದಯಾಸಾಗರ ಪಾಟೀಲ ಮೇಲೆ ಇರಲಿದೆ ಎಂದು ಶುಭ ಹಾರೈಸಿದ್ದರು. ಇದೀಗ ಅಂಥದ್ದೇ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ವಿಶಿಷ್ಟ ಮತ್ತು ವಿಶೇಷ ಎನ್ನುತ್ತಾರೆ ಸಾರ್ವಜನಿಕರು.
ಒಟ್ಟಿನಲ್ಲಿ ದಯಾಸಾಗರ ಪಾಟೀಲ ಅವರ 50ನೇ ಜನ್ಮ ದಿನವನ್ನು ವಿಶೀಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಈ ಬಾರಿ ಜನರ ಪ್ರತಿಕ್ರಿಯೆ, ಅಭಿಮಾನ ಮತ್ತು ಕಾಳಜಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿರುವುದು ಸುಳ್ಳಲ್ಲ.