ವಿಜಯಪುರ

ತಡವಲಗಾ ಗ್ರಾಪಂಗೆ ಸಿಇಒ ರಾಹುಲ್ ಶಿಂಧೆ ಭೇಟಿ, ಆರೋಗ್ಯ ಸಿಬ್ಬಂದಿಗೆ ನೋಟಿಸ್ ನೀಡಲು ಸೂಚನೆ

ಇಂಡಿ: ತಾಲೂಕಿನ ತಡವಲಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆರೋಗ್ಯ ಕೇಂದ್ರದ ಸಿಬ್ಬಂದಿಗೆ ನೋಟಿಸ್ ನೀಡಲು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದ್ದಾರೆ.
ಶುಕ್ರವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು.
ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೇ ಇರುವುದನ್ನು ಗಮನಿಸಿದ ಸಿಇಒ ಕೂಡಲೇ ತಾಲೂಕು ಅಧಿಕಾರಿಗೆ ಫೋನ್ ಮಾಡಿ ನೋಟಿಸ್ ನೀಡಲು ಸೂಚಿಸಿದರು. ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರು. ಗೈರಾದ ಸಿಬ್ಬಂದಿಗೆ ನೋಟಿಸ್ ನೀಡಲು ತಿಳಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ವಿವರ ಪಡೆದರು. ಮಾನವ ದಿನಗಳನ್ನು ಇನ್ನಷ್ಟು ಸೃಜಿಸುವಂತೆ ಪಿಡಿಒಗೆ ಸೂಚಿಸಿದರು. 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳು, ಅನುದಾನ ಹಾಗೂ ಖರ್ಚಾದ ಹಣದ ವಿವರ ಪಡೆದರು. ತಾಪಂ ಇಒ ಸುನೀಲ ಮದ್ದೀನ, ಪಿಡಿಒ ಮಹೇಶ ನಾಯಕ ಹಾಗೂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು. ಗ್ರಾಮದ ಕೆಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಿಇಒ ಅವರ ಗಮನಕ್ಕೆ ತಂದರು.

error: Content is protected !!