ವಿಜಯಪುರ

ಬಿಜೆಪಿ ವಿರುದ್ಧ ಹೆಚ್ಚಿದ ಹೋರಾಟ, ತಳವಾರ ಸಮುದಾಯದಿಂದ ಸರಣಿ ಪ್ರತಿಭಟನೆ, ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ

ವಿಜಯಪುರ: ಕೇಂದ್ರ ಸರ್ಕಾರ ಎಸ್‌ಟಿ ಪ್ರಮಾಣ ಪತ್ರ ನೀಡಲು ಆದೇಶ ಹೊರಡಿಸಿದರೂ ರಾಜ್ಯ ಸರ್ಕಾರ ಪಾಲಿಸದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ವಿರುದ್ಧ ತಳವಾರ ಸಮುದಾಯ ತಿರುಗಿ ಬಿದ್ದಿದೆ.
ಸಿಂದಗಿ ವಿಧಾನ ಸಭೆ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವುದಾಗಿ ವಾಗ್ದಾನ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ತದನಂತರ ಕಾಟಾಚಾರಕ್ಕೆ ಸುತ್ತೋಲೆ ಹೊರಡಿಸಿದ್ದು ಬಿಟ್ಟರೆ ಅದನ್ನು ಅನುಷ್ಟಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಸರ್ಕಾರದ ಯಾವುದೇ ಸುತ್ತೋಲೆಯನ್ನು ಅನುಷ್ಟಾನಕ್ಕೆ ತರುವಲ್ಲಿ ತೋರುವ ಮುತುವರ್ಜಿ ತಳವಾರ-ಪರಿವಾರ ಎಸ್‌ಟಿ ಪ್ರಮಾಣ ಪತ್ರದ ವಿಷಯದಲ್ಲಿ ತೋರುತ್ತಿಲ್ಲವೆಂದು ಆ ಸಮುದಾಯ ಆಕ್ರೋಶಗೊಂಡಿದೆ.
ಸಿಂದಗಿ ಉಪ ಚುನಾವಣೆಯಲ್ಲಿ ತಳವಾರ ಮತಗಳೇ ನಿರ್ಣಾಯಕವಾಗಿದ್ದವು. ಈ ಸಮುದಾಯದ ಮತಗಳಿಂದಲೇ ಸಿಂದಗಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು. ಇದೀಗ ಆ ಋಣ ಮರೆತಿರುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗುತ್ತದೆ ಎಂದು ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ:
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಾಗೂ ಮನೆ ಬಾಗಲಿಗೆ ಕಂದಾಯ ದಾಖಳೆಯಂತ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಳವಾರ ಸಮುದಾಯ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ ಹೊರಹಾಕುತ್ತಿರುವ ಹಿನ್ನೆಲೆ ಸರ್ಕಾರದ ಈ ಕಾರ್ಯಕ್ರಮಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ನಾಗಠಾಣ ಹಾಗೂ ಬಾಗಲಕೋಟೆಯ ಜಮಖಂಡಿಯಲ್ಲಿ ಈಗಾಗಲೇ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಆ ಅಭಿಯಾನ ಮುಂದುವರಿದಿದ್ದು ಪ್ರವರ್ಗ-1 ರಡಿ ನೀಡುವ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಪ್ರತಿಭಟಿಸಲಾಗುತ್ತಿದೆ.
ಸಂಗೋಗಿ-ಹಿರೇಮಸಳಿ:
ಇಂಡಿ ತಾಲೂಕಿನ ಸಂಗೋಗಿ ಮತ್ತು ಹಿರೇಮಸಳಿಯಲ್ಲಿ ಶನಿವಾರ ಪ್ರವರ್ಗ-1 ರಡಿ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ತಳವಾರ ಸಮುದಾಯದವರು ಪ್ರತಿಭಟನೆ ನಡೆಸಿದರು.
ಸಂಗೋಗಿಯಲ್ಲಿ ಮುಖಂಡ ತುಳಜಾರಾಮ ನಾಟಿಕಾರ ಮಾತನಾಡಿ, ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಿದರೂ ರಾಜ್ಯ ಬಿಜೆಪಿ ಸರ್ಕಾರ ಎಸ್‌ಟಿ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡುತ್ತಿವೆ. ಕೂಡಲೇ ಜಾತಿ ಪ್ರಮಾಣ ಪತ್ರ ನೀಡದೇ ಹೋದರೆ ಉಗ್ರ ಹೋರಾಟದ ಜೊತೆಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಸದಾನಂದ ವಾಲಿಕಾರ, ಅಂಬಣ್ಣ ವಾಲಿಕಾರ, ಹಿರಗು ಭೈರವಾಡಗಿ, ಯಶವಂತರಾಯ ಬಸವನ್ನಪ್ಪ ಬಿರಾದಾರ, ಸುದೀಪ ಆಲಮೇಲ, ಅಂಬರೀಶ ಬಿರಾದಾರ, ಅನಿಲ ಬಿರಾದಾರ, ಮಡಿವಾಳ ಸುಂಗಟಣ್ಣ, ಆಕಾಶ ಕೋಳಿ, ಪ್ರವೀಣ ಆಲಮೇಲ, ಲಕ್ಷ್ಮಿಕಾಂತ ವಾಲಿಕಾರ, ಲಕ್ಕು ಪೂಜಾರಿ, ಅನಿಲ ಆಲಮೇಲ, ನಿಂಗು ಬಿರಾದಾರ, ಯಮನಪ್ಪ ಪೂಜಾರಿ, ಹಿರೇಮಸಳಿಯಲ್ಲಿ ಯಲ್ಲಪ್ಪ ಡೊಂಗ್ರೋಜಿ, ಶರಣು ಯಂಕಂಚಿ, ಅರ್ಜಣ ತಳವಾರ, ಪಿರಪ್ಪ ವಾಲಿಕಾರ, ರಾಯಗೊಂಡ ತಳವಾರ, ರಮೇಶ ಡೊಂಗ್ರೋಜಿ, ಸುನೀಲ ಭಾಸಗಿ, ಶ್ರೀಕಾಂತ ಹಳಗುಣಕಿ, ನಿಂಗಪ್ಪ ತಿಳಗುಳ, ಸುರೇಶ ಡೊಂಗ್ರೋಜಿ, ರಾಜು ಯಂಕಂಚಿ, ಶ್ರೀಕಾಂತ ವಾಲಿಕಾರ, ರವಿ ರಾಯಜಿ ಮತ್ತಿತರರಿದ್ದರು.

error: Content is protected !!