ನಕಲಿ ತುಪ್ಪ ಮಾರಾಟ, ಅಧಿಕಾರಿಗಳ ದಿಢೀರ್ ದಾಳಿಗೆ ಬೆಚ್ಚಿಬಿದ್ದ ಅಂಗಡಿ ಮಾಲೀಕ
ಸರಕಾರ್ ನ್ಯೂಸ್ ವಿಜಯಪುರ
ನಕಲಿ ತುಪ್ಪ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 30 ಕೆಜಿ ತುಪ್ಪ ವಶಕ್ಕೆ ಪಡೆದಿದ್ದಾರೆ.
ವಿಜಯಪುರ ನಗರದ ಸಾಯಿ ಪಾರ್ಕ್ ನ ಪ್ರಾರ್ಥನಾ ಸ್ಕೂಲ್ ಪಕ್ಕದಲ್ಲಿನ ಶ್ರೀ ಬಾಲಾಜಿ ಹಾಲಿನ ಡೈರಿ ಎನ್ನುವ ಮಳಿಗೆ ಮೇಲೆ ಶುಕ್ರವಾರ ದಾಳಿ ನಡೆದಿದೆ.
ಕಳೆದ ಹಲವು ದಿನಗಳಿಂದ ಈ ಮಳಿಗೆ ಮೇಲೆ ನಿಗಾ ಇರಿಸಿದ್ದ
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ಏಕಾಏಕಿ ದಾಳಿ ನಡೆಸಿದ್ದಾರೆ.
ಈ ವೇಳೆ ನಕಲಿ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಸಾಮಗ್ರಿ ಹಾಗೂ ಬಿಲ್ ಬುಕ್ ಗಳು ಸಿಕ್ಕಿವೆ. ಅಧಿಕಾರಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ತಪ್ಪಿಸಿಕೊಳ್ಳಲೆತ್ನಿಸಿದ ಅಂಗಡಿ ಮಾಲೀಕ ರವಿ ನಿಂಗನಗೌಡ ಬಿರಾದಾರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಮುದ್ದೇಬಿಹಾಳ ತಾಲ್ಲೂಕಿನ ವಿಳಾಸ ಹೊಂದಿದ್ದ ಬಿಲ್ ಬುಕ್ ಸಿಕ್ಕಿದ್ದು, ಬೆಂಗಳೂರಿನಿಂದ ಖಾಸಗಿ ಬಸ್ ಮೂಲಕ ಟಿನ್’ಗಳಲ್ಲಿ ಕಲಬೆರಕೆ ತುಪ್ಪ ತರಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ವಶಪಡಿಸಿಕೊಂಡ ತುಪ್ಪ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.