ವಾಟ್ಸ್‌ಪ್‌ನಲ್ಲೇ ಚುಕ್ಕೆ ತೋರಿಸಿದ ಚಂದ್ರಮ, ಮೋಸ ಹೋದ ಇಂಜಿನಿಯರ್ ಪದವಿಧರೆ ! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಸರಕಾರ್ ನ್ಯೂಸ್ ವಿಜಯಪುರ
“ಹಾಯ್ ಡಿಯರ್” ಎಂದು ಮೆಸೇಜ್ ಮಾಡಿ ಇಂಜಿನಿಯರ್ ಪದವಿಧರೆಯನ್ನು ಬುಟ್ಟಿಗೆ ಹಾಕಿಕೊಂಡು ಚಂದ್ರಮನೋರ್ವ ವಾಟ್ಸ್‌ಪನಲ್ಲಿಯೇ ಚುಕ್ಕೆ ತೋರಿಸಿದ್ದು, ಆತನ ನಂಬಿದ ಯುವತಿ ಐದು ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದಾಳೆ !
ಹೌದು, ವಿಜಯಪುರದ ಜೈಲ್ ರಸ್ತೆಯ ಶಕ್ತಿ ನಗರದ ನಿವಾಸಿ ಮೂವತ್ತೆರಡು ವರ್ಷದ ಈಶ್ವರಿ (ಯುವತಿಯ ಮದುವೆ ನೆರವೇರದ ಹಿನ್ನೆಲೆ ಕಳಕಳಿಯಿಂದ ಹೆಸರು ಬದಲಿಸಲಾಗಿದೆ) ಎಂಬುವರು ವಂಚನೆಗೊಳಾದ ಯುವತಿ.
ಇಂಜಿನಿಯರಿಂಗ್ ಪದವಿಧರೆಯಾಗಿರುವ ಈಶ್ವರಿ ಸದ್ಯ ಮಕ್ಕಳಿಗೆ ಮನೆ ಪಾಠ ಮಾಡಿಕೊಂಡಿದ್ದು ಇನ್ನೂ ಮದುವೆಯಾಗಿಲ್ಲ. ಸೂಕ್ತ ವರ ಹುಡುಕಾಟಕ್ಕಾಗಿ ಈಶ್ವರಿ ಶಾದಿ ಡಾಟ್ ಕಾಮ್, ಭಾರತ ಮೆಟರಮೋನಿ, ಜೀವನ ಶಾದಿಗಳಲ್ಲಿ ತನ್ನ ವಿವರ ಅಪ್‌ಲೋಡ್ ಮಾಡಿದ್ದಾರೆ. ಈ ಜಾಲತಾಣದಿಂದ ಮಾಹಿತಿ ಪಡೆದ ವಂಚಕರ ಜಾಲವೊಂದು ಈಶ್ವರಿಯನ್ನು ವ್ಯವಸ್ಥಿತವಾಗಿ ವಂಚನೆಗೈದಿದೆ.
ಪ್ರಕರಣದ ಸ್ವಾರಸ್ಯ:
ಅ. 12ರಂದು ಈಶ್ವರಿ ಮೊಬೈಲ್‌ಗೆ ಹಾಯ್ ಡಿಯರ್ ಅಂತ ಸಂದೇಶ ಬಂದಿದೆ. ಆಕೆ ಕೂಡ ಮರು ಸಂದೇಶ ಕಳುಹಿಸಿದ್ದು, ಪರಸ್ಪರ ಪರಿಚಯವಾಗಿದೆ. ಆತನ ಹೆಸರು ಆರ್ಯಾಶ ಹೆಂಡ್ರಿಕ್ ಎಂದು ಗೊತ್ತಾಗಿದ್ದು, ಯುಎಸ್‌ಎದಲ್ಲಿರುವ ಸಿಟಿ ಮೆಸ್ಸಾಚ್ಯುಸೇಟ್ಸ್ ಎಂಬ ವಿವರ ನೀಡಿದ್ದಾನೆ. ಮುಂದೆ ಈಶ್ವರಿ ಭೇಟಿಗಾಗಿ ಭಾರತಕ್ಕೆ ಬರುತ್ತಿರುವುದಾಗಿ ಆರ್ಯಾಶ್ ಟಿಕೆಟ್ ಸಮೇತ ಸಂದೇಶ ಕಳುಹಿಸಿದ್ದನ್ನು ಈಶ್ವರಿ ನಂಬಿದ್ದಾಳೆ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದಾಗಿ ಸಂದೇಶ ಕಳುಹಿಸಿದ್ದು ನಂಬಿಕೆ ಹೆಚ್ಚಿಸಿದೆ. ಕೆಲ ಸಮಯದ ಬಳಿಕ ಮಹಿಳೆಯೊಬ್ಬಳು ಕರೆ ಮಾಡಿ ಮುಂಬೈ ವಿಮಾನ ನಿಲ್ದಾಣದಿಂದ ಮಾತನಾಡುತ್ತಿದ್ದು, ಆರ್ಯಾಶ ಹೆಂಡ್ರಿಕ್ ಸರ್ 50 ಸಾವಿರ ಡಾಲರ್ ತಂದಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿ ಪ್ರಕಾರ 10 ಸಾವಿರ ಡಾಲರ್ಸ್ ಮಾತ್ರ ತರಬೇಕು. ಹೀಗಾಗಿ ಅವರನ್ನು ಬಿಡುಲು ಆಗುವುದಿಲ್ಲ, ಫಾರಿನ್ ರಜಿಸ್ಟ್ರೇಶನ್ ಫೀಸ್ 44,999 ರೂಪಾಯಿ ಇಂಡಿಯನ್ ರೂಪಾಯಿ ಕಟ್ಟಿದರೆ ಮಾತ್ರ ಬಿಡುತ್ತೇವೆ ಎಂದು ಇಂಗ್ಲಿಷ್‌ನಲ್ಲಿ ಮಾತನಾಡಿ ಫೋನ್ ಕಡಿತಗೊಳಿಸಿದ್ದಾರೆ. ನಂತರ ಆರ್ಯಾಶ ಈಶ್ವರಿಗೆ ಮೆಸೇಜ್ ಮಾಡಿ 44,999 ರೂಪಾಯಿ ಫೋನ್‌ಪೇ ಮಾಡಲು ತಿಳಿಸಿ ಇಂಡಿಯನ್ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ. ಆದರೆ ಈಶ್ವರಿ ನಿರಾಕರಿಸಲಾಗಿ ತಾನು ತಂದಿರುವ ಅಷ್ಟೂ ಹಣ ಸೀಜ್ ಮಾಡುತ್ತಾರೆನ್ನಲಾಗಿ ಅದನ್ನು ನಂಬಿ ಈಶ್ವರಿ ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಿದ್ದಾಳೆ.
ಹಂತ ಹಂತವಾಗಿ ಹಣ ಪಾವತಿ:
ಮತ್ತೆ ಅ.26ರಂದು ಮತ್ತೆ ಫೋನ್ ಮಾಡಿ ಮನಿ ಲಾಂಡ್ರಿ ಸರ್ಟಿಫಿಕೇಟ್ ಸಲುವಾಗಿ 1,50,250 ರೂಪಾಯಿ ಫೋನ್ ಪೇ ಮಾಡಲು ಹೇಳಿದ್ದು, ಆಗಲೂ ಈಶ್ವರಿ ಹಣ ಹೊಂದಿಸಿ 40 ಸಾವಿರ ರೂಪಾಯಿ ಹಣ ವರ್ಗಾಯಿಸಿದ್ದಾಳೆ. ಅಲ್ಲದೇ, ಈಶ್ವರಿ ತಂಗಿ ಕೀರ್ತಿ ತನ್ನ ಖಾತೆಯಿಂದ 50 ಸಾವಿರ ರೂಪಾಯಿ ನೀಡಿದ್ದಾರೆ. ಉಳಿದ 60,250 ರೂ.ಗಳನ್ನುಎಲ್‌ಬಿಎಸ್ ಮಾರುಕಟ್ಟೆ ಮೇಲಿರುವ ಆಕಾಶ್ ಇಂಟರ್‌ನೆಟ್ ಇವರಲ್ಲಿ ಕೊಟ್ಟು ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ವರ್ಗಾವಣೆ ಮಾಡಿದ್ದಾರೆ.
ಮತ್ತೆ ಅ. 29ರಂದು ಫೋನ್ ಮಾಡಿ ಡಾಲರ್ ಟು ಇಂಡಿಯನ್ ಕರೆನ್ಸಿ ಕನ್ವರ್ಶನ್ ಸಲುವಾಗಿ 3,20,500 ರೂ. ಬೇಕೆಂದು ಸಂದೇಶ ಬಂದಿದ್ದು, ಆಗ ಈಶ್ವರಿ ತಮ್ಮ ಬಳಿ ಹಣ ಇಲ್ಲವೆಂದಿದ್ದಾರೆ. ಆಗ ಹಣ ಹಾಕದಿದ್ದರೆ ಆರ್ಯಾಶ್‌ನನ್ನು ಜೈಲಿಗೆ ಹಾಕಬೇಕಾಗುತ್ತದೆ ಎನ್ನಲಾಗಿ ಎರಡ್ಮೂರು ದಿನ ಕಾಲಾವಕಾಶ ಕೇಳಿದ ಈಶ್ವರಿ ತಮ್ಮ ಚಿನ್ನಾಭರಣ ಮಾರಿ ಹಂತ ಹಂತವಾಗಿ ಒಟ್ಟು 5,15,749 ರೂ. ಹಾಕಿದ್ದಾರೆ.
ಬಳಿಕ ಅನುಮಾನಗೊಂಡ ಈಶ್ವರಿ ಆರ್ಯಾಶ್‌ನ ಪಾಸ್‌ಪೋರ್ಟ್ ಮತ್ತು ವೀಸಾ ವಾಟ್ಸಪ್ ಮಾಡುವಂತೆ ತಿಳಿಸಿದ್ದಾರೆ. ಆದರೆ, ವೀಸಾ ಮಾತ್ರ ಕಳುಹಿಸಿದ್ದು ಪಾಸ್ ಪೋರ್ಟ್ ಸೀಜ್ ಮಾಡಿದ್ದಾಗಿ ಹೇಳಿದಾಗ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ವೀಸಾ ಪರಿಶೀಲಿಸಲಾಗಿ ಅದರಲ್ಲಿ ಫೋಟೊ ಎಡಿಟ್ ಮಾಡಿದ್ದು ಕಂಡು ಬಂದಿದೆ. ಹೀಗಾಗಿ ತಾನು ಮೋಸ ಹೋಗಿರುವುದು ಖಚಿತವಾಗಿ ಆತನಿಗೆ ಹಣ ಕೇಳಲಾಗಿ ಈವರೆಗೂ ಸಬೂಬು ಹೇಳುತ್ತಾ ಬಂದಿದ್ದಾನೆ. ಹೀಗಾಗಿ ಈಶ್ವರಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)