ನಮ್ಮ ವಿಜಯಪುರ

ಶಾಸಕ ಯತ್ನಾಳಗೆ ವಚನಾನಂದ ಶ್ರೀ ಟಾಂಗ್, ವಸಂತ ಬರಲಿ ಕಾಗೆಗೂ ಕೋಗಿಲೆಗೂ ವ್ಯತ್ಯಾಸ ತಿಳಿಯಲಿದೆ…!

ಸರಕಾರ್ ನ್ಯೂಸ್ ವಿಜಯಪುರ

ಹರಿಹರದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳನ್ನು ಪರೋಕ್ಷವಾಗಿ ಬ್ರೋಕರ್ ಎಂದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಇದೀಗ ಟಾಂಗ್ ನೀಡಿರುವ ಶ್ರೀಗಳು, ವಸಂತ ಬರಲಿ ಕಾಗೆ ಯಾವುದು ಕೋಗಿಲೆ ಯಾವುದು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.

ಭಾನುವಾರ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೆ ಮತ್ತು ಕೋಗಿಲೆಯ ವ್ಯತ್ಯಾಸ ತಿಳಿಯಲು ವಸಂತದ ಆಗಮನವಾಗಬೇಕು. ಆ ಕಾಲ ಶೀಘ್ರದಲ್ಲಿಯೇ ಕೂಡಿ ಬರಲಿದೆ ಎಂದು ಮುಗುಳ್ನಗೆ ಬೀರಿದರು.

ಹತ್ತು ಕೋಟಿ ರೂಪಾಯಿ ಪಡೆದು ಹೋರಾಟದಿಂದ ಹಿಂದೆ ಸರಿದ ಸ್ವಾಮಿಜಿಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಚನಾನಂದ ಶ್ರೀಗಳು, ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಪಾದಯಾತ್ರೆಗೂ ಮುನ್ನವೇ ಸರ್ಕಾರ ಹರಿಹರ ಪೀಠಕ್ಕೆ ಅನುದಾನ ನೀಡಿದೆ. ಬೇಕಾದರೆ ಆರ್‌ಟಿಐ ಮೂಲಕ ಮಾಹಿತಿ ಪಡೆಯಬಹುದೆಂದರು.

2020 ರಲ್ಲಿ ನಡೆದ ಹರ ಜಾತ್ರೆಗೂ ಮುನ್ನವೇ ಅಂದಿನದ ಬಸವರಾಜ ಬೊಮ್ಮಾಯಿ ಹರಿಹರ ಪೀಠದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಸ್ಥಾಪಿಸಿದ್ದರು. ಬಳಿಕ ಹರಿಹರ ಮತ್ತು ಕಾಗಿನೆಲೆ ಪೀಠಕ್ಕೆ ತಲಾ ಹತ್ತು ಕೋಟಿ ರೂಪಾಯಿ ಅನುದಾನ ಮಂಜೂರಿಸಲಾಯಿತು. ಆಗಿನ್ನೂ ಪಂಚಮಸಾಲಿ ಸಮಾಜದ ಪಾದಯಾತ್ರೆಯೇ ನಡೆದಿರಲಿಲ್ಲ. ಅದಕ್ಕೂ ಮೊದಲೇ ಮಠ ಅಭಿವೃದ್ಧಿ ಗೆ, ವಿದ್ಯಾರ್ಥಿ ನಿಲಯಕ್ಕೆ ಸರ್ಕಾರ ಹತ್ತು ಕೋಟಿ ರೂಪಾಯಿ ಅನುದಾನ ನೀಡಿದೆ. ಸರ್ಕಾರ ಆ ಹಣವನ್ನು ಏಕಾಏಕಿ ಬಿಡುಗಡೆ ಮಾಡುವುದಿಲ್ಲ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಇದೆಲ್ಲ ಪಾರದರ್ಶಕವಾಗಿದೆ. ಬೇಕಾದರೆ ಆರ್‌ಟಿಐ ಅಡಿ ಮಾಹಿತಿ ಪಡೆಯಬಹುದು. ದಾಖಲೆ ಬಿಡುಗಡೆಗೊಳಿಸುವವರು ಬಿಡುಗಡೆಗೊಳಿಸಲಿ ಎಂದರು.

ಪಂಚಮಸಾಲಿ ಸಮಾಜದ ಹೋರಾಟ ಕ್ರೆಡಿಟ್‌ಗೋಸ್ಕರ ನಡೆಯುತ್ತಿರುವುದಲ್ಲ. 2014 ಕ್ಕೂ ಮೊದಲು ಈ ಹೋರಾಟ ಏಕೆ ಆಗಲಿಲ್ಲ. 2013 ರಿಂದ 20 18 ರವರೆಗೆ ಹರಿಹರ ಪೀಠ 2ಎ ಮೀಸಲಾತಿಗೆ ಹೋರಾಡುತ್ತಲೇ ಬಂದಿದೆ. ಅಂದು ಸಿಎಂ ಯಡಿಯೂರಪ್ಪ ಗೆಜೆಟ್ ನೋಟಿಫಿಕೇಶನ್ ಮಾಡದೇ ಹೋಗಿದ್ದರೆ ಇಂದು ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿತ್ತಾ? ಯಡಿಯೂರಪ್ಪ ಅವರು ಗೆಜೆಟ್ ನೋಟಿಫಿಕೇಶನ್ ಮಾಡದೇ ಇದ್ದರೆ ಇಂದು 2 ಎ ಪಂಚಮಸಾಲಿ ಮೀಸಲಾತಿ ಬೇಡಿಕೆ ಈಡೇರುವುದು ಕಷ್ಟ ಸಾಧ್ಯ ಎಂದು ಖುದ್ದು ಬೊಮ್ಮಾಯಿಯೇ ತಿಳಿಸಿದ್ದಾರೆ. ಅಂದರೆ ಇಂದು ಇಷ್ಟೆಲ್ಲ ಹೋರಾಟಕ್ಕೆ ಹರಿಹರ ಪೀಠದ ಪ್ರಯತ್ನವೇ ಕಾರಣ ಎಂದಾಗಲಿಲ್ಲವೇ? ಎಂದು ವಚನಾನಂದ ಶ್ರೀಗಳು ಪ್ರಶ್ನಿಸಿದರು.

ಆಲಗೂರ ಪೀಠದ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರು, ಪೂಜ್ಯ ಧರಿದೇವರ ಸ್ವಾಮೀಜಿ, ಕುಂಚನೂರ ಶ್ರೀಗಳು, ಮುಖಂಡರಾದ ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ಡಾ.ಬಿ.ಎಂ. ಬಿರಾದಾರ, ರವಿ ಖಾನಾಪುರ ಮತ್ತಿತರರಿದ್ದರು.

error: Content is protected !!