ಬೆಳಗಾವಿ

ನಿಪ್ಪಾಣಿ ಮರಾಠಿಮಯ, ಇದೇನಾ ಕನ್ನಡ ಪ್ರೇಮ? ಎಂದ ಕನ್ನಡ ಹೋರಾಟಗಾರ

ಸರಕಾರ್ ನ್ಯೂಸ್ ಬೆಳಗಾವಿ

ಕನ್ನಡಿಗರ ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿಯ ನಿಪ್ಪಾಣಿಯೇ ಮರಾಠಿಮಯವಾಗಿರುವುದಕ್ಕೆ ಕನ್ನಡಪರ ಹೋರಾಟಗಾರ, ಕರವೇ ಮುಖಂಡ ರೇವಣಸಿದ್ದ ಗೋಡಕೆ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಸುಸಂದರ್ಭದಲ್ಲಿಯೇ ಹೋರಾಟಗಾರ ರೇವಣಸಿದ್ದ ಇಂಥದ್ದೊಂದು ಧ್ವನಿ ಎತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ನೂತನ ತಾಲ್ಲೂಕು ನಿಪ್ಪಾಣಿಯ ಬಸ್ ನಿಲ್ದಾಣದಲ್ಲಿ ಮರಾಠಿ ನಾಮಫಲಕಗಳು ರಾರಾಜಿಸುತ್ತಿವೆ. ಅವುಗಳನ್ನು ತೆರವುಗೊಳಿಸಬೇಕು.

ನಿಪ್ಪಾಣಿ ತಾಲ್ಲೂಕು ಹಾಗೂ ಇತರೆ ತಾಲ್ಲೂಕುಗಳ ಬಸ್ ಗಳ ವೇಳಾಪಟ್ಟಿಯನ್ನು ಮರಾಠಿಯಲ್ಲಿ ಬರೆದಿದ್ದು ಅದನ್ನು ಈ ಕೂಡಲೇ ತೆರವುಗೊಳಿಸಬೇಕು.ಇಲ್ಲದಿದ್ದರೆ ಕ.ರ.ವೇ.ಕಾರ್ಯಕರ್ತರೇ ಆ ಕೆಲಸ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯ ಉದಯವಾಗಿ ೬೬ ವರುಷ ಕಳೆದರೂ ಕನ್ನಡಕ್ಕೆ ಇನ್ನೂ ಅಗ್ರ ಸ್ಥಾನ ಸಿಗದಿರುವದು ನೋವಿನ ಸಂಗತಿ. ಕನ್ನಡಕ್ಕೆ ಸ್ಥಾನಮಾನಗಳನ್ನು ಹೋರಾಟ ಮಾಡಿ ಪಡೆದುಕೊಳ್ಳಬೇಕಾಗಿರುವುದು ಕನ್ನಡಿಗರ ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ನಿಪ್ಪಾಣಿ ಬಸ್ ನಿಲ್ದಾಣದ ಮರಾಠಿ ನಾಮಫಲಕ ಸರಕಾರದ ಮರಾಠಿ ಪ್ರೇಮ ಹಾಗೂ ಕನ್ನಡದ ಬಗ್ಗೆ ಇರುವ ಅಸಡ್ಡೆ ತೋರಿಸುತ್ತದೆ. ಈ ಕುರಿತು ಹೋರಾಟದ ರೂಪರೇಷೆ ಬಗ್ಗೆ ರಾಜ್ಯಾಧ್ಯಕ್ಷರಾದ ಪ್ರವೀಣಶೆಟ್ಟಿ ಅವರ ಜೊತೆಗೆ ಕೂಡಾ ಚರ್ಚಿಸುವುದಾಗಿ ತಿಳಿಸಿದ್ದಾರೆ.

error: Content is protected !!