ಬಿಜೆಪಿಗೆ ಬೇಡವಾದನೇ ಬಸವಣ್ಣ? ಅಣ್ಣನ ನೆಲದಲ್ಲಿಯೇ ಅವಮಾನ ? ಆಗಿದ್ದೇನು ಗೊತ್ತಾ?
ವಿಜಯಪುರ: ಸಮಾನತೆಯ ಹರಿಕಾರ, ಜಗತ್ತಿಗೆ ಜ್ಞಾನದ ಜ್ಯೋತಿ ಬೆಳಗಿದ ಮಹಾತ್ಮ ಬಸವೇಶ್ವರರ ಜನ್ಮ ದಿನವನ್ನು ಬಸವನಬಾಗೇವಾಡಿಯಲ್ಲಿಯೇ ಆಚರಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರವೇನೋ ಸರಿ. ಆದರೆ, ಇಂಥ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಬಿಜೆಪಿಗರು ಬಸವಣ್ಣನಿಗೆ ಅವಮಾನ ಮಾಡಿದ್ದಾರೆಂಬ ಕೂಗು ಭುಗಿಲೆದ್ದಿತು.
ಬಸವನಬಾಗೇವಾಡಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಬಸವ ಜಯಂತಿಯಲ್ಲಿ ಇಂಥದ್ದೊಂದು ಆರೋಪ ಕೇಳಿಬಂತು.
ಇದೇ ಮೊದಲ ಬಾರಿಗೆ ಸರ್ಕಾರದಿಂದ ಆಚರಿಸಲಾಗುತ್ತಿರುವ ರಾಜ್ಯಮಟ್ಟದ ಬಸವ ಜಯಂತಿಗೆ ಬಿಜೆಪಿಯ ಯಾರೊಬ್ಬರೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿಲ್ಲ. ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹಾಗೂ ವಿಪ ಸದಸ್ಯ ಪ್ರಕಾಶ ರಾಠೋಡ ಹೊರತುಪಡಿಸಿ ಇನ್ನುಳಿದ ನಾಯಕರು ಗೈರಾಗಿದ್ದರು.
ಸಿಎಂ ಏಕೆ ಬರಲಿಲ್ಲ?
ಈ ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದವರೇ ಆಗಿದ್ದು ಅದರಲ್ಲೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇನ್ನು ಉಸ್ತುವಾರಿ ಮಂತ್ರಿ ಉಮೇಶ ಕತ್ತಿ ಸಹ ಲಿಂಗಾಯಿತರು. ಆದರೆ, ಇವರಿಗೆಲ್ಲ ಲಿಂಗಾಯತ ಕೇವಲ ರಾಜಕೀಯಕ್ಕೆ ಬಳಕೆಯಾಗುತ್ತಿದೆಯಾ? ಬಸವಣ್ಣ ಲೆಕ್ಕಕ್ಕೆ ಇಲ್ಲವಾ ಎಂಬ ಆರೋಪಗಳು ಕೇಳಿ ಬಂದವು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಅವರಂತೂ ಸಿಎಂ ಬೊಮ್ಮಾಯಿ ಬಹಿರಂಗವಾಗಿ ಕ್ಷಮೆ ಯಾಚಿಸಿಬೇಕೆಂದು ಆಗ್ರಹಿಸಿದರು.
ಬಸವಜಯಂತಿಯನ್ನು ಬಸವಜನ್ಮಭೂಮಿಯಲ್ಲಿಯೇ ಸರ್ಕಾರದಿಂದ ಆಚರಿಸಬೇಕೆಂದು ಸದನದಲ್ಲಿ ಒತ್ತಾಯಿಸಿದ ಪರಿಣಾಮ ಸರ್ಕಾರ ಆದೇಶವೇನೋ ಹೊರಡಿಸಿದೆ. ಆದರೆ ಈ ಆದೇಶ ಇಚ್ಛಾಶಕ್ತಿಯಿಂದ ಕೂಡಿಲ್ಲ ಎಂದರು.
ಬಿಜೆಪಿಯ ಯಾವೊಬ್ಬ ನಾಯಕರೂ ಪಾಲ್ಗೊಂಡಿಲ್ಲ. ಆ ಮೂಲಕ ಬಸವ ವಿರೋಧಿ ನೀತಿ ಅನುಸರಿಸಿದ್ದಾರೆಂದು ಆರೋಪಿಸಿದರು. ಬಿಜೆಪಿಗೆ ಬಸವ ತತ್ವದಲ್ಲಾಗಲಿ, ಅಂಬೇಡ್ಕರ್ ತತ್ವದಲ್ಲಾಗಲಿ ನಂಬಿಕೆ ಇಲ್ಲ ಎಂಬುದು ಇದು ತೋರಿಸುತ್ತದೆ ಎಂದರು.
ಶಾಸಕ ಶಿವಾನಂದ ಪಾಟೀಲ ಸಹ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಸವಜಯಂತಿಯನ್ನು ಬಸವನಬಾಗೇವಾಡಿಯಲ್ಲಿಯೇ ಸರ್ಕಾರದಿಂದ ಆಚರಿಸಬೇಕೆಂಬ ನಿರ್ಧಾರ ಕೊನೇ ಕ್ಷಣದಲ್ಲಿ ತೀರ್ಮಾನವಾಗಿದೆ. ಹೀಗಾಗಿ ಬಹುತೇಕರಿಗೆ ಬರಲಿಕ್ಕೆ ಆಗಲಿಕ್ಕಿಲ್ಲ. ಬರುವ ದಿನಗಳಲ್ಲಿ ಇನ್ನಷ್ಟು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದರು.
ಬಸವಣ್ಣನವರ ತತ್ವ ಸಿದ್ಧಾಂತ ಬಿಜೆಪಿ ಸಿದ್ದಾಂತಕ್ಕೆ ವ್ಯತಿರಿಕ್ತ ಎಂಬ ಕಾರಣಕ್ಕೆ ಆ ಪಕ್ಷದ ಯಾವೊಬ್ಬ ಶಾಸಕರೂ ಪಾಲ್ಗೊಂಡಿಲ್ಲ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಶಿವಾನಂದ ಪಾಟೀಲ, ಅದು ಆ ಪಕ್ಷಕ್ಕೆ ಬಿಟ್ಟಿದ್ದು. ಆದರೆ, ಬಸವಣ್ಣ ಎಲ್ಲರಿಗೂ ಬೇಕು. ಸರ್ವರೂ ಬಸವಣ್ಣನವರ ತತ್ವ ಸಿದ್ದಾಂತವನ್ನು ಒಪ್ಪಿಕೊಳ್ಳುತ್ತಾರೆ ಎಂದರು.