ಸರ್ಕಾರಕ್ಕೆ ಪಂಚಮಸಾಲಿ ಸಮಾಜದಿಂದ ಎಚ್ಚರಿಕೆ, 2 ಎ ಮೀಸಲಾತಿಗೆ ಆಗ್ರಹ, ಸಿಎಂ ತವರಿನಿಂದಲೇ ಬೃಹತ್ ಹೋರಾಟ ಆರಂಭ
ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ನೀಡಿದ ಮೂರು ಗಡವುಗಳು ಮುಕ್ತಾಯವಾಗಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲ ಜಿಲ್ಲಾ ಕಚೇರಿಗಳ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹಾವೇರಿ ಇಲ್ಲವೇ ಶಿಗ್ಗಾಂವಿಯಿಂದಲೇ ಈ ಹೋರಾಟ ಆರಂಭವಾಗಲಿದ್ದು ಅಷ್ಟರೊಳಗಾಗಿ ಮೀಸಲಾತಿ ಘೋಷಿಸಬೇಕೆಂದು ಶುಕ್ರವಾರ ಸರ್ಕಾರಕ್ಕೆ ಒತ್ತಾಯಿಸಿದರು.
ಪಂಚಮಸಾಲಿ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿದ ಭರವಸೆಗೆ
ವರ್ಷದ ಮೇಲೆ ಮೂರು ತಿಂಗಳಾಗಿದೆ. ಕಳೆದ ಬಜೆಟ್ ಅಧಿವೇಶನದ ವೇಳೆ ಬಸವರಾಜ ಬೊಮ್ಮಾಯಿ ಸಹ ಮಾತುಕೊಟ್ಟಿದ್ದರು. ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ ಎಂದರು.
ಪ್ರಸಕ್ತ ಸಾಲಿಲ್ಲಿ ಏಪ್ರೀಲ್
21 ರಿಂದ 14 ದಿನಗಳ ಕಾಲ ಕೂಡಲ ಸಂಗಮದಲ್ಲಿ ಹೋರಾಟ ನಡೆಸಲಾಯಿತು. ಮೇ 5 ರಂದು ರಾಜ್ಯಾದ್ಯಂತ ಎಲ್ಲ ತಹಸೀಲ್ದಾರ ಕಚೇರಿ ಎದುರು ಧರಣಿ ನಡೆಸಲಾಯಿತು. ಶೇ.75 ರಷ್ಟು ಸಮಾಜ ಬಾಂಧವರು ಭಾಗವಹಿಸಿದ್ದರು. ಸಹಕಾರವೋ ಅಸಹಕಾರವೋ ಎಂಬ ಪ್ರಶ್ನೆಯನ್ನು ಆಯಾ ಸ್ಥಳೀಯ ನಾಯಕರ ಮೂಲಕ ಸರ್ಕಾರಕ್ಕೆ ಪತ್ರ ರವಾನಿಸಲಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳುವುದಾಗಿ ಸ್ವಾಮೀಜಿ ತಿಳಿಸಿದರು.
ಪ್ರತಿಮೆ ಅನಾವರಣ:
ಮೇ 8 ರಂದು ಹಿಟ್ಟಿನಹಳ್ಳಿಯಲ್ಲಿ ಚೆನ್ಮಮ್ಮನ ಬೃಹತ್ ಕಂಚಿನ ಪ್ರತಿಮೆ ಉದ್ಘಾಟನೆ ನೆರವೇರಿಸಲಾಗುತ್ತಿದ್ದು ಎಲ್ಲ ಸಮಾಜದ ಲಕ್ಷಾಂತರ ಜನ ಪಾಲ್ಗೊಳ್ಳುವರು.
ಲಕ್ಷ್ಮಿ ಹೆಬ್ಬಾಳಕರ ಕುಂಭ ಮೇಳ ಉದ್ಘಾಟಿಸುವರು. ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರ್ತಿ ಉದ್ಘಾಟಿಸುವರು. ಶಾಸಕ ಶಿವಾನಂದ ಪಾಟೀಲ ಮತ್ತಿತರರು ಪಾಲ್ಗೊಳ್ಳುವರು ಎಂದರು.
ಶೀಘ್ರದಲ್ಲೇ ವಿಜಯಪುರದಲ್ಲೂ ಕರ್ನಾಟಕದ ಅತೀ ಎತ್ತರದ ಚೆನ್ನಮ್ಮನ ಮೂರ್ತಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಕರೆಯಿಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಬಸವನಬಾಗೇವಾಡಿ, ಸಿಂದಗಿಯಲ್ಲಿ ಕಂಚಿನ ಪುತ್ಥಳಿ ನಿರ್ಮಿಸಲು ಸಿದ್ದತೆ ನಡೆದಿದೆ ಎಂದರು.
ವಿಜಯಪುರದ ರಾಣಿ ಚನ್ನಮ್ಮ ರಂಗಮಂದಿರ ಅಧೋಗತಿಗೆ ಇಳಿದಿದ್ದು ವಿಷಾದನೀಯ. ಈ ಬಗ್ಗೆ ಸ್ಥಳೀಯ ಶಾಸಕರ ಗಮನ ಸೆಳೆಯಲಾಗುವುದು ಎಂದರು.
ಕಿತ್ತೂರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಟ್ನಾಳ ಹಾಗೂ ಜಂಬಗಿಯ ಕೋಟೆ ಅಭಿವೃದ್ಧಿ ಪಡಿಸಲು ಒತ್ತಾಯಿಸಲಾಗುವುದು ಎಂದರು.
ಮುಖಂಡರಾದ ಸಾಹೇಬಗೌಡ ಬಿರಾದಾರ, ಕಾಂತು ಸಾಹುಕಾರ, ಅಶೋಕ ಬಗಲಿ,
ಜಗನ್ನಾಥ ಚೌದ್ರಿ, ಅನೀಲ ಬಿರಾದಾರ, ಉಮೇಶ ಬಿರಾದಾರ ಮತ್ತಿತರರಿದ್ದರು.