ಪಂಚಕಾಯಕ ಟ್ರಸ್ಟ್ ನಿಂದ ಲಿಂಗ- ಜಂಗಮ ದೀಕ್ಷೆ, ಮೂರು ದಿನ ಚಿಂತನಗೋಷ್ಠಿ, ಸುದ್ದಿಗೋಷ್ಠಿ ವಿವರ ಇಲ್ಲಿದೆ ನೋಡಿ….
ವಿಜಯಪುರ: ಇಲ್ಲಿನ ಸೋಲಾಪುರ ರಸ್ತೆಯ ಹುಂಡೆಕಾರ ಪೆಟ್ರೋಲ್ ಪಂಪ್ ಬಳಿಯ ಅಲ್ಲಮ ಪ್ರಭು ಶಾಲೆಯಲ್ಲಿ ಮೇ 9 ರಿಂದ ಮೂರು ದಿನಗಳ ಕಾಲ ಪಂಚ ಶಕ್ತಿ ಕಾಯಕ ಟ್ರಸ್ಟ್ ವತಿಯಿಂದ ಲಿಂಗದೀಕ್ಷೆ ಹಾಗೂ ಜಂಗಮ ದೀಕ್ಷೆ ಸಮಾರಂಭ ಹಾಗೂ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಕಮರಿಯ ಶ್ರೀ ರಾಯಲಿಂಗೇಶ್ವರ ಮಹಾ ಸಂಸ್ಥಾನಮಠದ
ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿ ಹೇಳಿದರು.
ಸಮಾಜದಲ್ಲಿ ಸಂಸ್ಕಾರ ಸಂಪ್ರದಾಯದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮೇ 9 ರಂದು ಬೆಳಗ್ಗೆ 7 ಕ್ಕೆ ನಗರದ ಕೇಂದ್ರ ಬಸ್ ನಿಲ್ದಾಣ ಹತ್ತಿರ ಇರುವ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಪ್ರಣವ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು. ಬಳಿಕ ಹುತಾತ್ಮ ವೃತ್ತದಿಂದ ಅಲ್ಲಮಪ್ರಭು ಶಾಲೆಯ ವರೆಗೆ ಜ್ಯೋತಿ ಯಾತ್ರೆ ನಡೆಯಲಿದೆ.
ಬೆಳಗ್ಗೆ 10 ಕ್ಕೆ ಧ್ವಜಾರೋಹಣ, ಬೆಳಗ್ಗೆ 10.15ಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮ ಭಾವಚಿತ್ರಕ್ಕೆ ವಿಶೇಷ ಪೂಜೆ, ಬೆಳಗ್ಗೆ 10.30 ಕ್ಕೆ ಆಧ್ಯಾತ್ಮಿಕ ಚಿಂತನಗೋಷ್ಠಿ ನಡೆಯಲಿದೆ ಎಂದರು.
ಬೆಳಗ್ಗೆ 11 ಕ್ಕೆ ಲಿಂಗದೀಕ್ಷೆ ಮತ್ತು ಜಂಗಮದೀಕ್ಷೆ ಕುರಿತು ಅರಿವು ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಶ್ರೀಗಳಿಂದ ಆಶೀರ್ವಚನ ಬಳಿಕ ಪ್ರಸಾದ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6 ರಿಂದ ವ್ಯಕ್ತಿತ್ವ ವಿಕಸನ ಗೋಷ್ಠಿ ನಡೆಯಲಿದೆ ಎಂದರು.
ಮೇ 10 ರಂದು ಬೆಳಗ್ಗೆ 10 ರಿಂದ 12 ರವರೆಗೆ ಕೃಷಿ ಬೇಸಾಯ ಹಾಗೂ ವ್ಯವಹಾರ ಚಿಂತನಗೋಷ್ಠಿ, ಸಂಜೆ ಗುರುಲಿಂಗ ಜಂಗಮ ಕಾಯಕ ಮತ್ತು ದಾಸೋಹ ಪ್ರವೃತ್ತಿಯ ಮಹತ್ವ ಚಿಂತನೆಗಳು ಎಂಬ ವಿಷಯದ ಕುರಿತು ಆಶೀರ್ವಚನ ನಡೆಯಲಿದೆ.
ಮೇ 11 ರಂದು ಬೆಳಗ್ಗೆ 10 ಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬಗಳ ಪಾತ್ರದ ಕುರಿತು ಉಪನ್ಯಾಸ ನಡೆಯಲಿದೆ. ಬೆಳಗ್ಗೆ 11 ಕ್ಕೆ ಜಿಲ್ಲೆಯ ಶರಣರ ಪರಿಚಯದ ಕುರಿತು ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಸಮಾರೋಪ ಸಮಾರಂಭ ನೆರವೇರಲಿದೆ ಎಂದರು.
ಪ್ರತಿ ದಿನ ಬೆಳಗ್ಗೆ ಲಿಂಗ ದೀಕ್ಷೆ ಹಾಗೂ ಜಂಗಮ ದೀಕ್ಷೆ ಹಾಗೂ ಜಂಗಮದೀಕ್ಷೆ, ಧ್ಯಾನ ಮೌನ ಮತ್ತು ಪ್ರಾರ್ಥನೆ ನೆರವೇರಲಿದೆ ಎಂದರು.
ಸಂಚಾಲಕ ಮಲ್ಲನಗೌಡ ಸೋಮನಗೌಡ ಪಾಟೀಲ ಮನಗೂಳಿ ಮಾತನಾಡಿ, ಜಂಗಮ ದೀಕ್ಷೆ ಹಾಗೂ ಲಿಂಗ ದೀಕ್ಷೆ ಕಾರ್ಯಕ್ರಮ 2013 ರಿಂದ ಈಚೆಗೆ ಕುಂಠಿತ ವಾಗಿದ್ದು ಅದನ್ನು ಇಮ್ಮಡಿಗೊಳಿಸಲು ಮೂರು ದಿನಗಳ ಕಾಲ ಲಿಂಗ ದೀಕ್ಷೆ ಹಾಗೂ ಜಂಗಮ ದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ರೀತಿ ದೇಣಿಗೆ ಸಂಗ್ರಹಿಸಿಲ್ಲ. ಒಳ್ಳೆಯ ಆಲೋಚನೆ ಇಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದು ನಾಡಿನ ಎಲ್ಲ ಮಠಾಧೀಶರು, ಶರಣರು ಸಂತರು ಸಹಕರಿಸಬೇಕೆಂದರು.
ಲುಂಗಿ, ಟಾವೆಲ್, ಲಿಂಗದ ವ್ಯವಸ್ಥೆ ಟ್ರಸ್ಟ್ ನಿಂದಲೇ ಮಾಡಲಾಗಿದೆ. ಪ್ರಸಾದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಎಲ್ಲ ಪರಮ ಪೂಜ್ಯರು ಬರಲಿ ಎಂಬ ಕಾರಣಕ್ಕೆ ಆಮಂತ್ರಣ ಪತ್ರ ಮುದ್ರಿಸಿಲ್ಲ ಎಂದರು.
ದಾನೇಶ ಅವಟಿ, ಸಂಗಮೇಶ ಶರಣರು ಇದ್ದರು.