ಸರ್ಕಾರಿ ಶಾಲೆ ನಿರ್ವಹಣೆಗೆ ದೇಣಿಗೆ; ಸರ್ಕಾರದ ಸುತ್ತೋಲೆ ವಾಪಸ್ !
ಸರಕಾರ್ ನ್ಯೂಸ್ ಬೆಂಗಳೂರು
ಸರ್ಕಾರಿ ಶಾಲೆಗಳ ಖರ್ಚು ವೆಚ್ಚಗಳ ನಿರ್ವಹಣೆಗೆ ಪಾಲಕರು ಹಾಗೂ ಪೋಷಕರಿಂದ ಪ್ರತಿ ತಿಂಗಳು 100 ರೂ. ದೇಣಿಗೆ ಪಡೆಯುವ ಸುತ್ತೋಲೆಯನ್ನು ಸರ್ಕಾರ ಹಿಂಪಡೆದಿದೆ.
ಸರ್ಕಾರಿ ಶಾಲೆಗಳ ನಿರ್ವಹಣೆಗಾಗಿ ಪಾಲಕರಿಂದ 100 ರೂ. ದೇಣಿಗೆ ಪಡೆಯಬಹುದೆಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪ್ರಥ್ವಿ ರೆಡ್ಡಿ ಮತ್ತಿತರರು ತೀವ್ರ ವಾಗ್ದಾಳಿ ನಡೆಸಿದ್ದರು.
ಶೇ. 40 ರಷ್ಟು ಕಮೀಷನ್ ತಿಂದಿರುವ ಬಿಜೆಪಿಗರು ಇದೀಗ ಜನರ ಜೇಬಿನಲ್ಲಿ ಉಳಿದ ಹಣಕ್ಕೂ ಕೈಹಾಕಿದ್ದಾರೆ. ಸರ್ಕಾರಕ್ಕೆ ನಾಚಕೆಯಾಗಬೇಕೆಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಾಗ್ದಾಳಿ ನಡೆಸಿದ್ದರು.
ದೇಣಿಗೆ ನೀಡುವುದು ಸ್ವ ಇಚ್ಛೆಯಿಂದ ಎಂದು ಹೇಳಿದ್ದರೂ ಸದರಿ ಸುತ್ತೋಲೆ ಪ್ರಕಾರ ಪೋಷಕರ ಮಧ್ಯೆ ತಾರತಮ್ಯಕ್ಕೆ ಕಾರಣವಾಗುತ್ತದೆ. ಸರ್ಕಾರಿ ಶಾಲೆಗೆ ಈಗ ಬರುತ್ತಿರುವ ಮಕ್ಕಳೂ ಬರದೇ ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾಗಬಹುದು. ಇದು ಸಂವಿಧಾನದ ಮೂಲಭೂತ ಹಕ್ಕು ಕಡ್ಡಾಯ ಶಿಕ್ಷಣಕ್ಕೆ ಚ್ಯುತಿ ಬರಲಿದೆ ಎಂದ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ವಾಪಸ್ ಪಡೆದಿದೆ.