ಬಿಸಿಯೂಟದ ಸಾಮಗ್ರಿ ಕಳವು, ಆರೋಪಿಗಳನ್ನು ಹೆಡೆಮುರಿ ಕಟ್ಟಿತಂದ ಖಾಕಿ ಪಡೆ
ಸರಕಾರ್ ನ್ಯೂಸ್ ವಿಜಯಪುರ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡುವ ಬಿಸಿ ಊಟದ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಆರೋಪಿಗಳನ್ನುಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದು, ಅವರಿಂದ ಒಟ್ಟು 25 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿವಾಸಿಗಳಾದ ಶರ್ಫಭೂಶಣ ಊರ್ಫ್ ಶರತ್ ಭೀಮಾಶಂಕರ ದೊಡ್ಡಮನಿ (22), ಶ್ರೀಕಾಂತ ದೇವೇಂದ್ರಪ್ಪ ಊಫ್ ಅಪ್ಪು ಕಟ್ಟಿ ಅಲಿಯಾಸ್ ಕಟ್ಟಿಮನಿ, ಮಲ್ಲಿಕಾರ್ಜುನ ರಾಮಪ್ಪ ಮೋಪಗಾರ, ಸಂತೋಷ ಜಗದೀಶ ಹೊಸಕೋಟಿ, ಸಂಜೀವಪ್ಪ ಊರ್ಫ್ ಸಂಜು ಮಾಳಪ್ಪ ಮ್ಯಾಗೇರಿ (22), ಸಚಿನ ಲಕ್ಷ್ಮಣ ಹುಣಶ್ಯಾಳ (22) ಬಂಧಿತ ಆರೋಪಿಗಳು. ಇವರಿಂದ ರಾಹುಲ್ ಶಂಕರ ಪವಾರ (33) ಹಾಗೂ ನಾಗರಾಜ ಬಸವರಾಜ ಉಪ್ಪಿನ (41) ದಾಸ್ತಾನು ಸ್ವೀಕರಿಸಿದ್ದರು.
ಘಟನೆ ಹಿನ್ನೆಲೆ:
ಈಚೆಗೆ ಗ್ರಾಮೀಣ ಠಾಣೆ ವ್ಯಾಪ್ತಿಯ ಬುರಾಣಪುರ, ಇಟ್ಟಂಗಿಹಾಳ ಹಾಗೂ ಹಿಟ್ನಳ್ಳಿ ಗ್ರಾಮಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡುವ ಬಿಸಿ ಊಟದ ಸಾಮಗ್ರಿಗಳು ಕಳುವಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಎಚ್.ಡಿ. ಆನಂದಕುಮಾರ ಎಎಸ್‌ಪಿ ಡಾ.ರಾಮ ಅರಸಿದ್ದಿ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ಸಿದ್ಧೇಶ್ವರ, ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ ಪಿಎಸ್‌ಐ ಜಿ.ಎಸ್. ಉಪ್ಪಾರ, ಮಹಿಳಾ ಪಿಎಸ್‌ಐ ಆರ್.ಎ. ದಿನ್ನಿ, ಎನ್.ಬಿ. ಉಲ್ಲಪದಿನ್ನಿ ಅವರನ್ನೊಳಗೊಂಡ ತಂಡ ರಚಿಸಿದ್ದರು.
ಈ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಇವರಿಂದ 2.70 ಲಕ್ಷ ರೂ.ಮೌಲ್ಯದ 50 ಕ್ವಿಂಟಾಲ್ ಪಡಿತರ ಅಕ್ಕಿ, 2.24 ಸಾವಿರ ರೂ.ಮೌಲ್ಯದ ಅಂದಾಜು 15 ಕ್ವಿಂಟಾಲ್ ತೊಗರಿ ಬೇಳೆ, 1.06 ಲಕ್ಷ ನಗದು, 8 ಲಕ್ಷ ರೂ.ಮೌಲ್ಯದ ಮಿನಿ ಗೂಡ್ಸ್ ಹಾಗೂ ಇನ್ನೊಂದು 6.50 ಲಕ್ಷ ರೂ.ಮೌಲ್ಯದ ಮಿನಿಗೂಡ್ಸ್, 4.50 ಲಕ್ಷ ರೂ.ಮೌಲ್ಯದ ಕ್ರೂಸರ್ ಸೇರಿ ಒಟ್ಟು 25 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.
ತನಿಖಾ ತಂಡದಲ್ಲಿ ಸಿಬ್ಬಂದಿಯಾದ ಎಂ.ಎನ್. ಮುಜಾವರ, ಎಂ.ಎಚ್. ಮಂಕಲಗಿ, ವಿ.ಎನ್. ಪಾಟೀಲ, ಐ.ವೈ. ದಳವಾಯಿ, ಎ.ಎಸ್. ಬಿರಾದಾರ, ಎಂ.ಎಸ್. ಮೇಟಿ, ಬಿ.ಕೆ. ಬಾಗವಾನ, ಆರ್.ಎಂ. ನಾಟಿಕಾರ ಇದ್ದರು. ಎಲ್ಲ ಸದಸ್ಯರಿಗೂ ಪ್ರಶಂಸನಾ ಪತ್ರ ಹಾಗೂ ಸೂಕ್ತ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.