ರಾಜ್ಯದ ಏಕೈಕ ಮಹಿಳಾ ವಿವಿ ಮುಚ್ಚುವುದೇ? ಶಾಸಕ ದೇವಾನಂದ ಪ್ರಶ್ನೆಗೆ ಸರ್ಕಾರದ ಉತ್ತರವೇನು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ….
ವಿಜಯಪುರ: ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ಮುಚ್ಚುವುದೇ? ಎಂಬ ಅನುಮಾನ ಕಳೆದ ಹಲವು ದಿನಗಳಿಂದ ಕಾಡುತ್ತಲೇ ಇದೆ. ಅನೇಕ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿವೆ. ಕೆಲವು ಮಹಿಳಾಮಣಿಗಳು ರಾಜಕೀಯ ನಾಯಕರಿಗೆ ಮನವಿಯೂ ನೀಡಿದ ವಿಚಾರ ಈಗ ಹಳೆಯದಾದರೂ ವಿಷಯ ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಹಾಗಾದರೆ ಮಹಿಳಾ ವಿವಿ ಮುಚ್ಚುವುದು ದಿಟವೇ ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ…..
ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರು, ಮಹಿಳಾ ವಿವಿ ಮುಚ್ಚುವುದಿಲ್ಲ. ಅಂಥ ಪ್ರಸ್ಥಾವನೆ ಸರ್ಕಾರದ ಮುಂದೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿವಿಯಿಂದ ಗ್ರಾಮೀಣ ಭಾಗದ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡ ಹಾಗೂ ರೈತರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ವಿಸ್ತರಣಾ ಚಟುವಟಿಕೆಗಳ ಮೂಲಕ ಮಹಿಳಾ ಸಬಲೀಕರಣ ಕಾರ್ಯಕ್ರಮ ಆಯೋಜಿಸುವ ಮೂಲಕ ಲಿಂಗತ್ವ ತಾರತಮ್ಯ ಹೋಗಲಾಡಿಸುವ ತರಬೇತಿಗಳನ್ನು ನೀಡಲಾಗುತ್ತಿದೆ. ಮಹಿಳಾ ಜ್ಞಾನ ಶಿಸ್ತುಗಳ ಅಧ್ಯಯನಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಂದುವರಿದು ವಿಶ್ವ ವಿದ್ಯಾಲಯದ ಶ್ರೇಯೋಭಿವೃದ್ಧಿಗಾಗಿ ಸ್ಥಳೀಯ ಜನಪ್ರತಿನಿಧಿಗಳು ಕಾಲ ಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಮುಚ್ಚಲಿದೆ ಎಂಬ ಊಹಾಪೋಹಗಳಿಗೆ ಶಾಸಕ ದೇವಾನಂದ ಅವರ ಪ್ರಶ್ನೆಗೆ ಸಚಿವ ಡಾ.ಅಶ್ವಥ್ ನಾರಾಯಣ ನೀಡಿದ ಉತ್ತರ ತೆರೆ ಎಳೆದಿದೆ.