ನಮ್ಮ ವಿಜಯಪುರ

ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟ್‌….! ಸಂಚಲನ ಮೂಡಿಸಿದ ಸಂತೋಷ ಭೇಟಿ

ಸರಕಾರ ನ್ಯೂಸ್‌ ವಿಜಯಪುರ

ಇನ್ನೇನು ರಾಜ್ಯ ವಿಧಾನ ಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಇದ್ದು ಆಗಲೇ ಪ್ರಮುಖ ಪಕ್ಷಗಳು ಸಮರೋಪಾದಿಯಲ್ಲಿ ಸಿದ್ಧತೆ ಆರಂಭಿಸಿವೆ.

ಅಂತೆಯೇ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸರಣಿ ಭೇಟಿ ಆರಂಭಿಸಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.

ಭಾನುವಾರ ಜಿಲ್ಲೆಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ, ಜಿಲ್ಲೆಯ ಪಕ್ಷ ಸಂಘಟನೆ ಬಗ್ಗೆ ಸಕಲ ಮಾಹಿತಿ ಕಲೆ ಹಾಕಿ ಸೂಕ್ತ ನಿರ್ದೇಶನ ನೀಡಿದರು.

ನಗರದ ಶ್ರೀಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ನಿಗಮ-ಮಂಡಳಿ ಅಧ್ಯಕ್ಷರು, ಟಿಕೆಟ್‌ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಶಾಸಕ ಯತ್ನಾಳ ಪ್ರತ್ಯಕ್ಷ:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮದಿಂದ ದೂರವುಳಿಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣರಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಜೊತೆಗೆ ಕಾಣಿಸಿಕೊಂಡು ಗಮನ ಸೆಳೆದರು.

ಕೆಲ ದಿನಗಳ ಹಿಂದಷ್ಟೇ ವಿಜಯಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕ್ರಮಕ್ಕೆ ಯತ್ನಾಳ ಗೈರಾಗಿದ್ದರು. ಆಗೆಲ್ಲಾ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಬಿಜೆಪಿ ಬಿ.ಎಲ್. ಸಂತೋಷ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜ್ಞಾನಯೋಗಾಶ್ರಮಕ್ಕೆ ಭೇಟಿ:

ಕಾರ್ಯಕ್ರಮಕ್ಕೂ ಮುನ್ನ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಬಿ.ಎಲ್‌. ಸಂತೋಷ, ಪೂಜ್ಯ ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಪೂಜ್ಯ ಸಿದ್ದೇಶ್ವರ ಶ್ರೀಗಳು ಈ ಸಮಾಜಕ್ಕೆ ತಂಗಾಳಿ, ಸುಹಾಸನೆ,‌ ನೆಮ್ಮದಿ, ಶಾಂತಿ ಎಂದು ಬಣ್ಣಿಸಿದರು.

ಪ್ರಕೃತಿ ನಿಯಮಕ್ಕೆ ಅನುಗುಣವಾಗಿ ಅವರು ಭೌತಿಕವಾಗಿ ನಮ್ಮ ಮಧ್ಯೆ ಅವರಿಲ್ಲ. ಆದರೆ ಅವರ ಚೇತನ ನಮ್ಮಲ್ಲಿದೆ. ಪ್ರಕೃತಿ ನಿಯಮಕ್ಕೆ ಯಾರಿಗೂ ಅತೀತನಾಗಿರಲು ಸಾಧ್ಯವಿಲ್ಲ. ಪೂಜ್ಯ ಸಿದ್ದೇಶ್ವರ ಶ್ರೀಗಳು ಭೌತಿಕವಾಗಿಲ್ಲದಿರಬಹುದು ಅವರ ವಿಚಾರದಲ್ಲಿದ್ದಾರೆ. ಅವರ ಚೇತನ ನಮ್ಮಲ್ಲಿದೆ ಎಂದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕೂಡ ಭೇಟಿ ನೀಡಿ ನುಡಿನಮನ ಸಲ್ಲಿಸಿದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ್ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಪಿ.ಎಚ್. ಪೂಜಾರ, ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಆರ್‌.ಎಸ್‌. ಪಾಟೀಲ ಕೂಚಬಾಳ, ಉಮೇಶ ಕೋಳಕೂರ, ಚಂದ್ರಶೇಖರ ಕವಟಗಿ, ದಯಾಸಾಗರ ಪಾಟೀಲ, ಶಿವರುದ್ರ ಬಾಗಲಕೋಟ ಮತ್ತಿತರರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ಮಾಡಿ)

error: Content is protected !!