ವಿಜಯಪುರ

ಆನ್‌ಲೈನ್ ದೋಖಾ- 41 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಉದ್ಯೋಗಿ

ಸರಕಾರ ನ್ಯೂಸ್ ವಿಜಯಪುರ

ಆನ್‌ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂಥದ್ದೇ ಪ್ರಕರಣದಲ್ಲಿ ಇಲ್ಲೋರ್ವ ಖಾಸಗಿ ನೌಕರ 41 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ನಗರದ ಅಡತ ಬಜಾರ್‌ದ ಮಹಾವೀರ ರಸ್ತೆಯ ನಿವಾಸಿ ವೃಷಬ್ ಪುಟರ್‌ಮಲ್ ರುಣವಾಲ್ ಎಂಬುವವರು ಹಣ ಕಳೆದುಕೊಂಡ ನೌಕರ. ರೆಸಾರ್ಟ್‌ವೊಂದರಲ್ಲಿ ನೌಕರಿ ಮಾಡುತ್ತಿರುವ ಈತ ಮ್ಯಾನೇಜರ್‌ನ ಸಲಹೆ ಮೇರೆಗೆ ಹಣ ಹೂಡಿ ವಂಚನೆಗೊಳಗಾಗಿದ್ದಾರೆ.

ಹೂಡಿಕೆ ಮಾಡಿದ ಹಣಕ್ಕೆ ಶೇ. 200 ರಷ್ಟು ಲಾಭಾಂಶ ಕೊಡುವ ಆಮಿಷವೊಡ್ಡಿ ವೃಷಬ್‌ನಿಂದ 41 ಲಕ್ಷಕ್ಕೂ ಅಧಿಕ ಹಣ ವಂಚಿಸಲಾಗಿದೆ. ಸಲಹೆ ನೀಡಿದ ಮ್ಯಾನೇಜರ್ ಸಹ 34 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಮ್ಯಾನೇಜರ್ ನೀಡಿದ ಆನ್‌ಲೈನ್ ವಿಳಾಸಕ್ಕೆ ಸಂಪರ್ಕಿಸಿದ ವೃಷಬ್ ಅತ್ತ ವಂಚಕರು ನೀಡಿದ ಸಲಹೆಗಳನ್ನು ತಪ್ಪದೇ ಪಾಲಿಸಿದ್ದಾರೆ. ಆರಂಭದಲ್ಲಿ 10 ಸಾವಿರ ರೂಪಾಯಿ ತೊಡಗಿಸಿದ್ದಾರೆ. ಬಳಿಕ ಹಂತ ಹಂತವಾಗಿ ಟ್ರೇಡಿಂಗ್ ಮಾಹಿತಿ ನೀಡಲಾಗಿದ್ದು, ಆ ಪ್ರಕಾರ ವೃಷಬ್ ಹಣ ತೊಡಗಿಸುತ್ತಾ ಹೋಗಿದ್ದಾರೆ. ಕೊನೆಗೆ 10 ಲಕ್ಷ ರೂಪಾಯಿ ತೊಡಗಿಸಿದಾಗ ಇನ್ನೂ ಹೆಚ್ಚಿನ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಪ್ರಚೋದಿಸಿದ್ದಾರೆ.

ಕೊನೆಗೆ 24 ಲಕ್ಷಕ್ಕೂ ಅಧಿಕ ಹಣ ತೊಡಗಿಸಿದಾಗ ವ್ಯಾಲೆಟ್‌ನಲ್ಲಿ 92 ಲಕ್ಷಕ್ಕೂ ಅಧಿಕ ಮೊತ್ತ ಗೋಚರಿಸಿದೆ. ಆಗ ಹಣ ಪಡೆಯಲು ಮುಂದಾದಾಗ ತೆರಿಗೆ ಹಣ ಎಂದು 16 ಲಕ್ಷಕ್ಕೂ ಅಧಿಕ ಹಣ ನೀಡಿದರೆ ಮಾತ್ರ ಎಲ್ಲ ಹಣ ಬರಲಿದೆ ಎನ್ನಲಾಗಿ ವೃಷಬ್ ಅದನ್ನೂ ಸಹ ಆನ್‌ಲೈನ್ ಮೂಲಕ ಜಮಾ ಮಾಡಿದ್ದಾರೆ. ಆದರೆ, ಕಟ್ಟಿದ ಹಣವಾಗಲಿ ಹೆಚ್ಚಿದ ಲಾಭಾಂಶವಾಗಲಿ ಮರಳಿ ಬಾರದ ಕಾರಣ ವಂಚನೆಯ ಅರಿವಾಗಿ ಸೈಬರ್ ಸಹಾಯವಾಣಿ-1930ಗೆ ದೂರು ನೀಡಿದ್ದಾರೆ.

error: Content is protected !!