ವಿಜಯಪುರ

ಸಾಲೋಟಗಿಯಲ್ಲಿ ಎಂಎಸ್‌ಐಎಲ್ ಮಳಿಗೆ ಸ್ಥಾಪನೆ ಬೇಡ, ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಮನವಿ, ಶಾಸಕ ಯಶವಂತರಾಯಗೌಡ ವಿರುದ್ದ ಆಕ್ರೋಶ

ವಿಜಯಪುರ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ಎಂಎಸ್‌ಐಎಲ್ ಸ್ಥಾಪನೆ ವಿರೋಧಿಸಿ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮಸ್ಥರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ನೂರಾರು ಮಹಿಳೆಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ವಿರುದ್ಧ ಆಕ್ರೋಶ ಹೊರಹಾಕಿದರು.
ಬಳಿಕ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಕೆಲ ಕಾಲ ಧರಣಿ ನಡೆಸಿದರು. ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಕಲ್ಲಯ್ಯ ಹಿರೇಪಠ ಮಾತನಾಡಿ, ಶಾಸಕರು ನಮ್ಮೂರಿಗೆ ಕುಡಿಯಲು ನೀರು ಕೊಡಿ ಎಂದರೆ ಸಾರಾಯಿ ಮಳಿಗೆ ಸ್ಥಾಪಿಸಲು ಹೊರಟಿದ್ದಾರೆ. ನಮ್ಮ ಮಕ್ಕಳಿಗೆ ಶಾಲೆ ಬೇಕು, ಅಂಗನವಾಡಿ ಬೇಕು, ಪೌಷ್ಠಿಕ ಆಹಾರ ಬೇಕು. ಅದನ್ನು ಒದಗಿಸುವುದನ್ನು ಬಿಟ್ಟು ಸಾರಾಯಿ ಕುಡಿಸಲು ಹೊರಟಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ಹೊರಹಾಕಿದರು.
ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ನಮ್ಮೂರಲ್ಲಿ ಸ್ಥಾಪಿಸಬಾರದು ಎಂದು ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಠರಾವು ಮಂಡಿಸಲಾಗಿದೆ. ಆದರೂ, ಠರಾವು ಲೆಕ್ಕಿಸದೇ ಮದ್ಯ ಮಾರಾಟ ಮಳಿಗೆ ಸ್ಥಾಪಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.
ಮಹಿಳಾ ಸ್ವಸಹಾಯ ಸಂಘದ ಧುರೀಣೆ ಅಂಬವ್ವ ರಾಮಗೊಂಡ ಖೈರಾವಕರ ಮಾತನಾಡಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಶಾಲೆ, ಅಂಗನವಾಡಿ ಸ್ಥಾಪಿಸಲು ಮುತುವರ್ಜಿ ತೋರದೆ ಎಂಎಸ್‌ಐಎಲ್ ಮಳಿಗೆ ಸ್ಥಾಪಿಸಿ ಗ್ರಾಮೀಣ ಬಡ ಜನರನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು.
ಗ್ರಾಪಂ ಸದಸ್ಯ ಶಿವರಾಜ ಲೋಣಿ, ಶೋಭಾ ಶಹಾಪುರ, ಶಾಂತಾ ದರೆಣ್ಣವರ, ಭಾರತಿ ಬಿಜಾಪುರ, ಸುಮಿತ್ರಾ ತಳಕೇರಿ, ಸತ್ಯವ್ವ ಸಂಗೋಗಿ, ಬಸಮ್ಮ ಧರೆನ್ನವರ, ಮಾನಂದ ತಳಕೇರಿ, ಸುರೇಖಾ ಖೈರಾವಕರ, ಗೌರಾಬಾಯಿ ಹೀಗೆ ಹಲವು ಮುಖಂಡರು ಇದ್ದರು. ಬಳಿಕ ಅಬಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.

error: Content is protected !!