ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗೆ ವಾಮಾಚಾರ, ಬದುಕಿರುವಾಗಲೇ ತಿಥಿ, ಶಿವ ಶಿವಾ…ಇದೆಂಥ ವಿಕೃತಿ…!
ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಯ ತಿಥಿ ಪೂಜೆ ಮಾಡಿರುವ ವಿಕೃತ ಘಟನೆಯೊಂದು ವಿಜಯಪುರ ತಾಲೂಕಿನ ಅರಕೇರಿ ತಾಂಡಾ-1ರಲ್ಲಿ ಬೆಳಕಿಗೆ ಬಂದಿದೆ.
ಸೋಮವಾರ ರಾಜ್ಯಾದ್ಯಂತ ಎಸ್‌ಎಸ್‌ಎಲ್ ಸಿ ಪ್ರಥಮ ಪರೀಕ್ಷೆ ಆರಂಭಗೊಂಡಿದ್ದು, ಎಲ್ಲೆಡೆ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಡೆಯುತ್ತಿದೆ. ಆದರೆ, ಅರಕೇರಿ ತಾಂಡಾ-1 ರ ಬಳಿಯ ರಾಷ್ಟ್ರೀಯ ಹೆದ್ದಾರಿ 50 ಬದಿಯಲ್ಲಿ ಪರೀಕ್ಷಾರ್ಥಿ ಸಚಿನ್ ನಾಯಕ ಎಂಬ ವಿದ್ಯಾರ್ಥಿಯ ಪೋಟೋಗೆ ಹೂವಿನ ಹಾರ ಹಾಕಿ, ಟೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ಪೂಜೆ ಮಾಡಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಘಟನೆಯಿಂದ ವಿದ್ಯಾರ್ಥಿ ಸಚಿನ್ ನಾಯಕ ಭಯಭೀತನಾಗಿದ್ದಾನೆ. ಇನ್ನು ಪರೀಕ್ಷಾರ್ಥಿಯ ಪೋಷಕರು ಭಯ ವ್ಯಕ್ತಪಡಿಸಿದ್ದಾರೆ. ನಮ್ಮ ಮಗನ ಪೋಟೋ ಇಟ್ಟು ಈ ರೀತಿ ದುಷ್ಕೃತ್ಯವೆಸಗಿದವರ ಪೊಲೀಸರು ಪತ್ತೆ ಮಾಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.