ರಾಜ್ಯ

ಸುಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಭವನ ಉದ್ಘಾಟನೆ ! ನೂತನ ಅಧ್ಯಕ್ಷ ವಿಜಯಗೌಡ ಪಾಟೀಲ

ವಿಜಯಪುರ: ಗುಡ್ಡಾಪುರದ ಶ್ರೀ ದಾನಮ್ಮದೇವಿ ಟ್ರಸ್ಟ್ ನಿಂದ ಆ. 1 ರಂದು ಕರ್ನಾಟಕ‌ ಭವನದ ಉದ್ಘಾಟನೆ ಸಮಾರಂಭ ಹಂಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದರು. ಈ ಹಿಂದಿನ ಬಿಜೆಪಿ ಸರ್ಕಾರ ಗುಡ್ಡಾಪುರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕಾಗಿ 11 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿತ್ತು. ಇದೀಗ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಕೇವಲ ದಾಸೋಹಕ್ಕೆ ಅವಕಾಶ ಇದ್ದು ಏಕ ಕಾಲಕ್ಕೆ ನಾಲ್ಕು ಸಾವಿರ ಜನ ಪ್ರಸಾದ ಸೇವಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಇಚ್ಛಾ ಶಕ್ತಿ ಫಲವಾಗಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ವಿಶೇಷ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆಗೊಳಿಸಿದ್ದರು ಎಂದು ತಿಳಿಸಿದರು‌. ದುದನಿಯ ಮೌನ ತಪಸ್ವಿ ಜಡೆ ಶಾಂತಲಿಂಗ ಶ್ರೀಗಳು, ಜಿಡಗಾ ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ‌. ವಿಶೇಷವಾಗಿ ಅವಧೂತ ಪರಂಪರೆಯ ವಿನಯ ಗುರೂಜಿ ಆಗಮಿಸುತ್ತಿದ್ದಾರೆ. ಶಿಷ್ಟಾಚಾರ ಪ್ರಕಾರ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ‌‌. ಪಕ್ಷಾತೀತವಾಗಿ ಎಲ್ಲ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದರು. ಗುಡ್ಡಾಪುರ ಸುಕ್ಷೇತ್ರಗಳಲ್ಲೊಂದು. ಅಲ್ಲಿ ಯಾವುದೇ ರಾಜಕಾರಣ ಮಾಡಲ್ಲವೆಂದು ಎಲ್ಲರೂ ಪ್ರತಿಜ್ಞೆ ಮಾಡಿದ್ದೇವೆ. ಆದರೂ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅವರನ್ನು ತಾಯಿಯೇ ನೋಡಿಕೊಳ್ಳಲಿದ್ದಾಳೆ ಎಂದರು. ಸಿಎಂ ಸಿದ್ದರಾಮಯ್ಯ ಕೂಡ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ದೇವಸ್ಥಾನಕ್ಕೆ ಅನುದಾನ ಕೊಟ್ಟಿದ್ದಾರೆ. ಅವರನ್ನು ಸ್ಮರಿಸುತ್ತೇವೆ. ಮಹಾರಾಷ್ಟ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡಿಲ್ಲ. ಕರ್ನಾಟಕ ದ ಸಹಾಯ ಸಹಕಾರ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದ ಎಲ್ಲ ನಾಯಕರನ್ನು ಆಹ್ವಾನಿಸುತ್ತಿದ್ದೇವೆ ಎಂದರು. ಟ್ರಸ್ಟ್ ನ ಹೊಸ ಆಡಳಿತ ಮಂಡಳಿ ರಚನೆಯಾದ ಕೇವಲ 30 ದಿನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ‌ ನೀಡಲಾಗಿದೆ. ಭಕ್ತರಿಗಾಗಿ ಸಲಹಾ ಪೆಟ್ಟಿಗೆ ಇಡಲಾಗಿದೆ. ಭಕ್ತರು ತಮ್ಮ ಸಲಹೆ- ಸೂಚನೆಗಳನ್ನು ಬರೆದು ಪೆಟ್ಟಿಗೆ ಯಲ್ಲಿ ಹಾಕಿದರೆ ಆದಷ್ಟು ಅವುಗಳನ್ನು ಅನುಷ್ಟಾನಕ್ಕೆ ತರಲು ಯತ್ನಿಸಲಾಗುವುದು ಎಂದರು.ಟ್ರಸ್ಟ್ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಮುಖಂಡರಾದ ಚಂದ್ರಶೇಖರ ಇಂಡಿ, ಶಂಬುಲಿಂಗ ಮಮದಾಪುರ, ಷಣ್ಮುಖಪ್ಪ ಗುಡ್ಡೋಡಗಿ, ಸಾಗರ ಕೆಂಪಣ್ಣವರ, ದಾನಪ್ಪ ಪೂಜಾರಿ ಮತ್ತಿತರರಿದ್ದರು.

error: Content is protected !!