ಕೋಲಿ ಕಬ್ಬಲಿಗ ಗಂಗಾಮತಕ್ಕೂ ಸಿಗುವುದೇ ಎಸ್‌ಟಿ, ಸದನದಲ್ಲಿ ಡಾ.ಸಾಬಣ್ಣ ಪ್ರಶ್ನೆಗೆ ಸಿಕ್ಕ ಉತ್ತರವೇನು?
ಸರಕಾರ್ ನ್ಯೂಸ್ ಬೆಳಗಾವಿ
ಪರಿಶಿಷ್ಟ ಪಂಗಡ ಸೇರ್ಪಡೆಗಾಗಿ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಕೋಲಿ, ಕಬ್ಬಲಿಗ, ಬೆಸ್ತ ಹಾಗೂ ಗಂಗಾಮತ ಸಮಾಜದ ಬೇಡಿಕೆ ಈಡೇರುವುದು ಯಾವಾಗ?
ಈ ಸಮಾಜಗಳ 37 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಮುಂದೆ ವರದಿ ಇದ್ದು, ಅದರ ಅನುಷ್ಟಾನಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ.
ಸರ್ಕಾರ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು, ಕೋಲಿ, ಕಬ್ಬಲಿಗ, ಬೆಸ್ತ ಹಾಗೂ ಗಂಗಾಮತ ಸೇರಿ 37 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮೂಲಕ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಅಂತಿಮ ವರದಿಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ 2014 ಮಾ.3ರಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ನಂತರ ಕೇಂದ್ರ ಸರ್ಕಾರದ ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾದಿಂದ ಕೇಳಲಾಗಿದ್ದ ಅಂಶಗಳ ಬಗ್ಗೆ ಸಮರ್ಥನೆ, ಅಭಿಪ್ರಾಯಗಳನ್ನು ಕನ್ನಡ ವಿವಿಯಿಂದ ಪಡೆದು ರಾಜ್ಯ ಸರ್ಕಾರದಿಂದ 2019 ಜು.12 ನರ್ರಯ 2021 ಫೆ.2 ರಂದು ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಮಾಹಿತಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರ್ಯಾಯ ಎಂದು ಪರಿಗಣಿಸಬಹುದೇ?
ಈ ಸಮುದಾಯಗಳ ಟೋಕ್ರಿ ಕೋಳಿ, ಡೋರ್ ಕೋಳಿ ಪರ್ಯಾಯ ಪದಗಳು ಈಗಾಗಲೇ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವುದರಿಂದ ಕೋಲಿ, ಬೆಸ್ತ ಮತ್ತು ಇತರ 37 ಪರ್ಯಾಯ ಪದಗಳು ಬಿಟ್ಟು ಹೋದ ಪರ್ಯಾಯ ಪದ ಎಂದು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಕ್ರಮ ವಹಿಸಬಹುದೇ? ಎಂಬ ಡಾ.ಸಾಬಣ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಕರ್ನಾಟಕ ರಾಜ್ಯದ ಎಸ್‌ಟಿ ಪಟ್ಟಿಯಲ್ಲಿ ಕೋಲಿ ಡೋರ್, ಟೋಕ್ರೆ ಕೋಲಿ, ಕೊಲಚಾ, ಕೊಲಘಾ ಜಾತಿಗಳು ಸೇರಿವೆ. ಬೇಸ್ತ, ಗಂಗಾಮತ ಮತ್ತು ಇದರ 37 ಪರ್ಯಾಯ ಪದಗಳು ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿರುವುದರಿಂದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಭಾರತ ಸಂವಿಧಾನ ಅನುಚ್ಛೇದ 342 (2)ರ ಪ್ರಕಾರ ಯಾವುದೇ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ. ಹೀಗಾಗಿ ಬೆಸ್ತ, ಗಂಗಾಮತ ಮತ್ತು ಇದರ 37 ಪರ್ಯಾಯ ಪದಗಳು ಕೋಲಿ ಡೋರ್, ಟೊಕ್ರೆ ಕೋಲಿ, ಕೊಲಚಾ, ಕೊಲಗಾ ಜಾತಿಗಳ ಪರ್ಯಾಯ ಪದಗಳುಅಲ್ಲದೇ ಇವರುವುದರಿಂದ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇರುವುದರಿಂದ ಈಗಾಗಲೇ ಮೇಲ್ಕಂಡಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಪ್ರಸ್ತಾವನೆ ಕೇಂದ್ರ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಕೋಲಿ ಕಬ್ಬಲಿಗ ಗಂಗಾಮತ ಸೇರಿದಂತೆ 37 ಪರ್ಯಾಯ ಪದಗಳು ಎಸ್‌ಟಿಗೆ ಸೇರ್ಪಡೆಗೊಳಿಸುವ ಸರ್ಕಾರ ಪ್ರಸ್ತಾವನೆ ಬಗ್ಗೆ ಡಾ.ಸಾಬಣ್ಣ ಧ್ವನಿ ಎತ್ತಿದ್ದು ಮುಂಬರುವ ದಿನಗಳಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಿದೆ ಎಂಬುದು ಕಾದು ನೋಡಬೇಕಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)
ಡಾ ಸಾಬಣ್ಣ ತಳವಾರ ಅವರು ಶಿಕ್ಷಣ ರಂಗದ ತಳ ಸಮುದಾಯಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯ. ಅವರು ಭಾರತದ ಬುನಾದಿ ಸಮುದಾಯ ಆಗಿರುವ ಕೋಲಿ,ಬೆಸ್ತ ಮತ್ತಿತರ ಗಂಗೆ ಮಕ್ಕಳ ಕುರಿತು ಎತ್ತಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಮಹಾಭಾರತದ ಕರ್ತೃ ವ್ಯಾಸರ ವಂಶಸ್ತರಾದರೂ ಸಮುದಾಯ ಇಂದಿಗೂ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತಿ ನಿಕೃಷ್ಠವಾದ ಜೀವನ ನಡೆಸುತ್ತಿದೆ. ದೇಶ ಎಂದರೆ ಗೊತ್ತಿರದ ಇವರು ತಾವು ಇದ್ದದ್ದೇ ದೇಶ. ಬಲಿಷ್ಠರಿಗೆ ಸಲ್ಲಿಸುತ್ತಿರುವುದೆ ವೃತ್ತಿ, ಜೀವನ. ಜೋಕುಮಾರ,ಎಲ್ಲಮ್ಮ, ಪೋಷಮ್ಮ, ಪಿಲಕಮ್ಮ ಇತ್ಯಾದಿ ದೇವತೆ ಆರಾಧಿಸುವ ಇವರು ಪ್ರಕೃತಿ ಪೂಜಕರು. ಇಂಥ ಜನಾಂಗ ಕನಿಷ್ಠ ಅಭಿವೃದ್ಧಿ ಸಾಧಿಸಬೇಕಾದರೆ ಸಾಂವಿಧಾನಿಕ ಆಸರೆ ಇವರಿಗೆ ಅಗತ್ಯ ಇದೆ. ಇತಿಹಾಸದ ಎಲ್ಲ ಹಂತಗಳಲ್ಲಿ ಕ್ಷಾತ್ರ ಸೇವೆ ನೀಡಿರುವ ಇವರು ದೈಹಿಕವಾಗಿ ಬಲಾಢ್ಯರು. ಇವರಿಗೆ ಬುಡಕಟ್ಟು ಜನಾಂಗದ ಅಡಿ ಮೀಸಲಾತಿ ಒದಗಿಸಿದರೆ ಸಮಾಜದಕ್ಕೆ ಆಸರೆ ಸಿಕ್ಕಂತೆ ಆಗುತ್ತದೆ. ಆದ್ದರಿಂದ ಸರ್ಕಾರ ಈ ದಿಶೆಯಲ್ಲಿ ಸಕಾರಾತ್ಮಕವಾಗಿ ಆಲೋಚಿಸಿ ಕ್ರಮ ಕೈಕೊಂಡರೆ ಸಮಾಜ ಚಿರಋಣಿ ಆಗಿರುತ್ತದೆ ಮತ್ತು ಅಂಥವರನ್ನು ಎದೆಯಲ್ಲಿಟ್ಟುಕೊಂಡು ತಲೆಯಮೇಲೆ ಹೊತ್ತು ಮೆರೆಸುತ್ತದೆ.
…..ಡಾ ಬಿ ಆರ್ ಅಣ್ಣಾಸಾಗರ