ದೇವರಹಿಪ್ಪರಗಿಗೆ ಸಿಗುವುದೇ ಉಪನೋಂದಣಿ ಕಚೇರಿ? ಸದನದಲ್ಲಿ ಶಾಸಕ ಸೋಮನಗೌಡಗೆ ಸಿಕ್ಕ ಉತ್ತರವೇನು
ಸರಕಾರ್ ನ್ಯೂಸ್ ಬೆಳಗಾವಿ
ನೂತನ ತಾಲೂಕು ದೇವರಹಿಪ್ಪರಗಿಯಲ್ಲಿ ಉಪ ನೋಂದಣಿ ಕಚೇರಿ ಪ್ರಾರಂಭಿಸಬೇಕೆನ್ನುವ ಬೇಡಿಕೆಗೆ ಅನುಗುಣವಾಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಾಡಿರುವ ಶಾಸಕರು, ದೇವರಹಿಪ್ಪರಗಿ ಪಟ್ಟಣದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮ ಏನು? ಯಾವಾಗಿನಿಂದ ಕಚೇರಿ ಪ್ರಾರಂಭಿಸಲಾಗುವುದೆಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಉತ್ತರವೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ, ದೇವರಹಿಪ್ಪರಗಿ ಪಟ್ಟಣದಲ್ಲಿ ಉಪನೋಂದಣಾಧಿಕಾರಿ ಕಚೇರಿ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಮುತುವರ್ಜಿ ವಹಿಸಿದೆ. ರಾಜ್ಯದಲ್ಲಿ ಪರಿಣಾಮಕಾರಿಯಾದ, ಸಮರ್ಥವಾದ ಆಡಳಿತ ನೀಡಲು ಹಾಗೂ ಸಾವರ್ಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆಗಳನ್ನು ನೀಡುವ ಉದ್ದೇಶದಿಂದ 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ಹೊಸದಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ 16 ತಾಲೂಕುಗಳಲ್ಲಿ ಈಗಾಗಲೇ ಉಪ ನೋಂದಣಿ ಕಚೇರಿ ಪ್ರಾರಂಭಿಸಲಾಗಿದೆ. ಇನ್ನುಳಿದಂತೆ ವಿಜಯಪುರ ಜಿಲ್ಲೆ, ದೇವರಹಿಪ್ಪರಗಿ ಸೇರಿ 34 ತಾಲೂಕುಗಳಲ್ಲಿ ಉಪನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಮಾನದಂಡಗಳನ್ವಯ ಪರಿಶೀಲಿಸಿ ಅಗತ್ಯವಿರುವ ವೃಂದ ಬಲವನ್ನು ಸೃಜಿಸಲು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಹೊಸ ತಾಲೂಕು ಕೇಂದ್ರಗಳಲ್ಲಿ ಉಪನೋಂದಣಾಧಿಕಾರಿ ಕಚೇರಿ ಪ್ರಾರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದಿದ್ದಾರೆ.
ಒಟ್ಟಿನಲ್ಲಿ ದೇವರಹಿಪ್ಪರಗಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಸ್ಥಾಪಿಸಬೇಕೆನ್ನುವ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಇವರ ಯೋಜನೆ ಸಾಕಾರದ ಹಂತದ್ದಲ್ಲಿದ್ದು, ಪರಿಶೀಲನೆ ಬಳಿಕ ಕಾರ್ಯಗತಗೊಳ್ಳುವ ವಿಶ್ವಾಸ ಮೂಡಿಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)