ಸಂವಿಧಾನ ಸಾಕ್ಷಿ ಮದುವೆ, ಅತಿಥಿ ಉಪನ್ಯಾಸಕರ ಅಪರೂಪದ ವಿವಾಹ…!
ಸರಕಾರ್ ನ್ಯೂಸ್ ಜಮಖಂಡಿ
ಭಾರತೀಯ ಸಂವಿಧಾನದ ದಿನವಾದ ನ.26ರಂದೇ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಮತ್ತು ಉಪನ್ಯಾಸಕಿ ವಿಶಿಷ್ಟ ವಿವಾಹ ಮಹೋತ್ಸವಕ್ಕೆ ಮುನ್ನುಡಿ ಬರೆದಿದ್ದಾರೆ.
ಹೌದು, ಮೂಲತಃ ಜಮಖಂಡಿಯವರಾದ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಚನಬಸು ಗುಣದಾಳ ಹಾಗೂ ಸಂಗೀತಾ ಕೋಟ್ಯಾಳ ಇಂಥದ್ದೊಂದು ಅಪರೂಪದ ವಿವಾಹ ಮಹೋತ್ಸವಕ್ಕೆ ಸಂಕಲ್ಪ ಮಾಡಿದ್ದಾರೆ.
ಜಮಖಂಡಿಯ ಆಲಗೂರ ಪುನರ್ ವಸತಿ ಕೇಂದ್ರದ ಹತ್ತಿರವಿರುವ ಪ್ರಶಾಂತ ನಗರದ ಮುಕ್ತಿಧಾಮ ಆಶ್ರಮದಲ್ಲಿ ನ. 26ರಂದು ಬೆಳಗ್ಗೆ 11.30ಕ್ಕೆ ಸಂವಿಧಾನ ಸಾಕ್ಷಿಯಾಗಿ, ಬುದ್ದ, ಬಸವ, ಅಂಬೇಡ್ಕರ್ ಚಿಂತನಗಳೊಂದಿಗೆ ವಿವಾಹ ಮಹೋತ್ಸವ ಜರುಗಲಿದೆ.
ಬಸವಕೇಂದ್ರ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದೊಂದಿಗೆ ನಡೆಯುವ ಈ ವಿವಾಹವನ್ನು ಪರಮ ಪೂಜ್ಯ ಶ್ರೀ ಸಹಜಾನಂದ ಅವಧೂತರು ಹಾಗೂ ಕೃಷ್ಣಾನಂದ ಅವಧೂತರು ಸಾಕ್ಷೀಕರಿಸಲಿದ್ದಾರೆ.
ಬಾಳ ಸಂವಿಧಾನ ಅಂಗೀಕಾರ:
ಪ್ರಸ್ತುತ ಈ ಮದುವೆ ವಿಶಿಷ್ಟವಾಗಿದ್ದು ಯಾವುದೇ ಮಂತ್ರ-ಘೋಷ, ಮಂಗಳ ವಾದ್ಯ ಮೇಳಗಳು ಇರುವುದಿಲ್ಲ. ಬದಲಾಗಿ ವಧು-ವರರು ಸಂವಿಧಾನದ ಪ್ರಸ್ತಾವನೆ ಮಾದರಿಯಲ್ಲಿಯೇ ಬಾಳ ಸಂವಿಧಾನದ ವಿಧಿ ಬೋಧಿಸಲಿದ್ದಾರೆ. ಆ ಬೋಧನೆ ಹೀಗಿದೆ-
“ಭಾರತದ ಪ್ರಜೆಗಳಾದ ನಾವಿಬ್ಬರು ಸಂಗಾತಿಗಳಾಗಲು ಮನಸಾ ಒಪ್ಪಿ ಬಾಳನ್ನು ಮತ್ತಷ್ಟು ಸದೃಢ, ಸ್ವಾವಲಂಬಿ, ಸಾರ್ಥಕ ಮತ್ತು ಸಂಘ ಜೀವನದಲ್ಲಿ ನಡೆಸಲು, ಸುಖ-ದುಃಖ, ನೋವು-ನಲಿವು, ಬಡತನ-ಸಿರಿತನದಂಥ ಎಲ್ಲ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಜೀವನ ಶೈಲಿಯನ್ನು ಅನುಸರಣೆ ಮಾಡುತ್ತ, ಇಬ್ಬರ ಕುಟುಂಬವರ್ಗ, ಸ್ನೇಹಬಳಗ, ಸಮುದಾಯ ಮತ್ತು ಸಮಸ್ತ ದುಡಿಯುವ ವರ್ಗದ ಹಿತೈಷಿಗಳಿಗೆ ಅವರ ಕರುಣೆ, ಪ್ರೀತಿಯನ್ನು ಸಮನಾಗಿ ಹಂಚುತ್ತ, ಅವರಿಗಾಗಿ ನಾವು, ನಮಗಾಗಿ ಅವರು ಎನ್ನುವ ಹಾಗೆ ಜೀವಿಸಲು ಮುಂದಾಗಿ, ಯಾವುದೇ ಗಳಿಗೆಯಲ್ಲಿ ಅಪನಂಬಿಕೆ, ಅನುಮಾನ, ಅತೀರೇಕಕ್ಕೆ ಆಸ್ಪದ ಕೊಡದೆ ಮೈತ್ರಿ ಭಾವದಿಂದ ಎಲ್ಲವನ್ನು ಸರಿದೂಗಿಸಿಕೊಳ್ಳುತ್ತ, ಪರಸ್ಪರರ ಅಭಿಪ್ರಾಯವನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸಮಾನತೆ ಕುಟುಂಬವನ್ನು ಕಟ್ಟಿಕೊಳ್ಳಲು ಸಂಕಲ್ಪ ಮಾಡಿ, 2022ನೇ ವರಷ ನವೆಂಬರ್ ತಿಂಗಳ 26 ರಂದು ಈ “ಈ ಬಾಳ ಸಂವಿಧಾನ”ವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಕುಟುಂಬ ಶಾಸನವಾಗಿ ಜಾರಿಗೊಳಿಸಿಕೊಳ್ಳುತ್ತ, ಜೀವನದುದ್ದಕ್ಕೂ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ ಬಾಳ್ವೆ ಮಾಡಲು ಪಣ ತೊಟ್ಟಿದ್ದೇವೆ…”
ಎಂದು ವಿಧಿವತ್ತಾಗಿ ಬೋಧಿಸುವ ಮೂಲಕ ನವಜೋಡಿಗಳು ನವ ದಾಂಪತ್ಯಕ್ಕೆ ಕಾಲಿರಿಸಲಿದ್ದು, ಇದೀಗ ಈ ಮದುವೆ ನಾಡಿನ ಚಿಂತಕರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಸ್ವಯಂ ಪ್ರೇರಿತವಾಗಿ ಮದುವೆಗೆ ಆಗಮಿಸಿ ಶುಭಕೋರುವ ಆಶಯ ವ್ಯಕ್ತಪಡಿಸುತ್ತಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)