ರಾಜ್ಯ

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ, ಭರ್ತಿಯಾದ, ಖಾಲಿಯಾದ ಹುದ್ದೆ ಎಷ್ಟು? ಕೆಎಎಸ್‌ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ನೋಡಿ ಸವಿವರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಕೆಪಿಎಸ್‌ಸಿ ಮೂಲಕ ಎಷ್ಟು ಇಲಾಖೆಗಳ ಎಷ್ಟು ಹುದ್ದೆಗಳಿಗೆ ಭರ್ತಿ ಮಾಡಲಾಗಿದೆ ಗೊತ್ತಾ?

ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಮಾಹಿತಿಯಂತೆ ಸರ್ಕಾರದ ವಿವಿಧ ಇಲಾಖೆಗಳಿಂದ/ ನೇಮಕಾತಿ ಪ್ರಾಧಿಕಾರಿಗಳಿಂದ ಸ್ವೀಕೃತವಾಗಿರುವ ಪ್ರಸ್ತಾವನೆಗಳ ಪೈಕಿ 21827 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗದಿಂದ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಈ ಸಂಬಂಧ ಕಳೆದ 3 ವರ್ಷಗಳಲ್ಲಿ 12780 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು ಕೆಲವು ಅಧಿಸೂಚಿಸಿದ ಹುದ್ದೆಗಳ ಪೈಕಿ 2320 ಹುದ್ದೆಗಳನ್ನು 2019ರ ಪೂರ್ವದಲ್ಲಿಯೇ ಪೂರ್ಣಗೊಳಿಸಿ ಇಲಾಖೆಗಳಿಗೆ ರವಾನಿಸಲಾಗಿದೆ. ಇನ್ನುಳಿದಂತೆ ಅದರಲ್ಲಿ 6314 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಮತ್ತು 413 ಹುದ್ದೆಗಳನ್ನು ವಿವಿಧ ಕಾರಣಗಳಿಗಾಗಿ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಭರ್ತಿ ಮಾಡಲಾಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದ್ದಾರೆ.

ಇನ್ನು ಫೆ. 2021ರಲ್ಲಿ 107 ಕೆಎಎಸ್‌ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು ಒಂದು ವರ್ಷ ಪೂರ್ಣಗೊಂಡರೂ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿಲ್ಲ. ಈ ಬಗ್ಗೆ ಕಾರಣ ಕೇಳಲಾಗಿ ಕರೊನಾ ಸಾಂಕ್ರಮಿಕ ಕಾಯಿಲೆ ಹಾಗೂ ಲಾಕ್‌ಡೌನ್‌ ಹಿನ್ನೆಲೆ ವಿಳಂಬವಾಗಿದೆ ಎಂದಿದ್ದಾರೆ.

ಮುಂದುವರಿದು, 2017-18ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳಿಗೆ ದಿನಾಂಕ: 31/01/2020ರಂದು ಅಧಿಸೂಚನೆ ಹೊರಡಿಸಿ ಕರೊನಾ ಲಾಕ್‌ಡೌನ್‌ನಿಂದ ಪರೀಕ್ಷೆ ಮುಂದೂಡಿ, ಕರೊನಾ ಹರಡುತ್ತಿದ್ದ ಸಂದರ್ಭದಲ್ಲಿಯೂ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ 24/08/2020ರಂದು ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ದಿನಾಂಕ: 13/02/2021 ರಿಂದ 16/02/2021ರವರೆಗೆ ನಡೆಸಲಾಗಿದೆ.

2015ನೇ ಸಾಲಿನ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾಗದ ಕೆಲವು ಅಭ್ಯರ್ಥಿಗಳು ಮೌಲ್ಯಮಾಪನದ ಕುರಿತು ಆರೋಪಿಸಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ವಿಳಂಬವಾಗಿದೆ ಎಂದಿದ್ದಾರೆ.

ಇನ್ನು ವಿವಿಧ ಇಲಾಖೆಯ ಸಹಾಯಕ ಅಭಿಯಂತರರು/ಕಿರಿಯ ಅಭಿಯಂತರರು ಹುದ್ದೆಗಳಿಗೆ 14/12/2021, 15/12/2021 ಮತ್ತು 29/12/2021 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ದಿನಾಂಕ: 05/01/2022 ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಆಯೋಗ ಅಧಿಸೂಚಿಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮಾನುಗತವಾಗಿ ಪರೀಕ್ಷೋತ್ತರ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದ್ದು ಸಹಾಯಕ ಅಭಿಯಂತರರು/ಕಿರಿಯ ಅಭಿಯಂತರರ ಹುದ್ದೆಗಳ ಪರೀಕ್ಷೆಗಳನ್ನು ಡಿಸೆಂಬರ್‌ 2021ರ ಅಂತ್ಯದಲ್ಲಿ ನಡೆಸಲಾಗಿರುವುದರಿಂದ ಸದ್ಯದಲ್ಲಿಯೇ ಸದರಿ ಹುದ್ದೆಗಳ ಪರೀಕ್ಷೋತ್ತರ ಕಾರ್ಯ ಪೂರ್ಣಗೊಳಿಸುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

error: Content is protected !!