ಇಳಿವಯಸ್ಸಲ್ಲೂ ಎಂಎ ಪರೀಕ್ಷೆ ಬರೆದ ಅಜ್ಜ, ಯುವಕರನ್ನೂ ನಾಚಿಸಿದ ಈ ರುಮಾಲುಧಾರಿ, ಅಬ್ಬಬ್ಬಾ ಅದೇನ್ ಕಲಿಕಾ ಆಸಕ್ತಿ ಅಂತೀರಿ…?
ವಿಜಯಪುರ: ಶಾಲೆ-ಕಾಲೇಜು ಅಂದರೆ ಮೂಗು ಮುರಿಯುವ ಅದೇಷ್ಟೋ ಯುವಕರಿಗೆ ಇಲ್ಲೊಬ್ಬ ಅಜ್ಜ ಮಾದರಿಯಾಗಿದ್ದಾನೆ.
ತನ್ನ 82ನೇ ಇಳಿವಯಸ್ಸಲ್ಲೂ ಎಂಎ ಸ್ನಾತಕೋತ್ತರ ಪದವಿ ಪಡೆಯುವ ಈ ಅಜ್ಜನ ಹುಮ್ಮಸ್ಸು ಯುವಪಡೆಯನ್ನು ನಾಚಿಸುವಂತಾಗಿದೆ. ಅದರಲ್ಲೂ ಇಂಗ್ಲಿಷ್ ವಿಷಯದಲ್ಲಿ ಪರೀಕ್ಷೆ ಎದುರಿಸುವ ಈ ಅಜ್ಜನ ಪರಿ ನೋಡಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳೇ ನಿಬ್ಬೆರಗಾಗಿದ್ದಾರೆ. ಅಂದಹಾಗೆ ಯಾರಪ್ಪ ಈ ಗಟ್ಟಿಗ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್….
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ವಿದ್ಯಾರ್ಥಿ ನಿಂಗಯ್ಯ ಬಸಯ್ಯ ಒಡೆಯರ ತಮ್ಮ 82ನೇ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಶುಕ್ರವಾರ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಪ್ರಥಮ ವರ್ಷದ ಎಂಎ ಇಂಗ್ಲಿಷ್ ಪರೀಕ್ಷೆಯನ್ನು ನಿಂಗಯ್ಯ ಒಡೆಯರ ಶುಕ್ರವಾರ ಸಮರ್ಥವಾಗಿ ಎದುರಿಸಿದರು.
ಮಧ್ಯಾಹ್ನ ಪರೀಕ್ಷೆ ಆರಂಭಗೊಳ್ಳುತ್ತಿದ್ದಂತೆ ಹಸಿರು ರುಮಾಲು, ದಪ್ಪ ಕನ್ನಡಕ, ಬಿಳಿ ಅಂಗಿ ಧರಿಸಿ ಪರೀಕ್ಷಾ ಕೇಂದ್ರಕ್ಕೆ ನಿಂಗಯ್ಯ ಬಸಯ್ಯ ಒಡೆಯರ ಅವರ ಎಲ್ಲರನ್ನೂ ಅಚ್ಚರಿಗೊಳಪಡಿಸಿದರು.
ಮೂಲತಃ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗುಡೂರ ಗ್ರಾಮದವರಾದ ಇವರು ಆರೋಗ್ಯ ಇಲಾಖೆಯ ನಿವೃತ್ತ ನೌಕರರು. ಈಗಾಗಲೇ ಇಗ್ನೋದಿಂದ 4 ಸ್ನಾತಕೋತ್ತರ ಪದವಿ ಪೂರೈಸಿರುವ ಇವರು ಇದೀಗ 5ನೇ ಸ್ನಾತಕೋತ್ತರ ಪರೀಕ್ಷೆ ಎದುರಿಸುತ್ತಿದ್ದಾರೆ.
ಇನ್ನೋರ್ವ ಪರೀಕ್ಷಾರ್ಥಿ ನಿವೃತ್ತ ಉಪನ್ಯಾಸಕ ಪರಸಪ್ಪ ಮಡಿವಾಳರ ತಮ್ಮ 66 ನೇ ವರ್ಷದಲ್ಲಿ ಇಂಗ್ಲಿಷ್ ಪರೀಕ್ಷೆ ಬರೆಯುತ್ತಿದ್ದಾರೆ. ಇವರು ಆರ್.ಡಿ. ಪಾಟೀಲ ಕಾಲೇಜ್‌ನ ನಿವೃತ್ತ ಪ್ರಾಚಾರ್ಯರಾಗಿದ್ದಾರೆ. ನಿವೃತ್ತಿ ಜೀವನದಲ್ಲಿ ಜ್ಞಾನಾರ್ಜನೆಗಾಗಿ ವಿದ್ಯಾಭ್ಯಾಸ ಮುಂದುವರಿಸಿರುವ ಈ ಹಿರಿಯರ ಕಲಿಕಾಸಕ್ತಿ ಕಂಡು ಸಂಯೋಜಕ ಡಾ. ಮಂಜುನಾಥ ಕೋರಿ, ಪ್ರಾಚಾರ್ಯ ಡಾ. ಭಾರತಿ ವೈ ಖಾಸನೀಸ್, ಸಂಸ್ಥೆಯ ಆಡಳಿತಾಧಿಕಾರಿಗಳು ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.