ರಾಜ್ಯ

ಬಸವಣ್ಣನವರು ಹೊಳೆಗೆ ಹಾರಿದರಾ? ಯತ್ನಾಳರ ಹೇಳಿಕೆಗೆ ಬಸವಾನುಯಾಯಿಗಳಿಂದ ವ್ಯಾಪಕ ಆಕ್ರೋಶ

ಸರಕಾರ ನ್ಯೂಸ್‌ ಬೆಂಗಳೂರು

ಮಹಾ ಮಾನವತಾವಾದಿ ಮಹಾತ್ಮ ಬಸವೇಶ್ವರರ ಲಿಂಗೈಕ್ಯ ಹೇಗಾದರು? ಎಂಬ ವಾದ-ವಿವಾದ ಇಂದು ನಿನ್ನೆಯದಲ್ಲ. ಈಗಲೂ ಕಗ್ಗಂಟಾಗಿಯೇ ಉಳಿದಿರುವ ಆ ವಿಚಾರವನ್ನು ಕೆದಕಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ʼಬಸವಣ್ಣನವರ ಹಾಗೆ ಹೊಳೆಗೆ ಹಾರಬೇಕುʼ ಎಂಬ ಪದ ಬಳಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಬಸವಣ್ಣನವರ ಹಾಗೆ ಹೊಳೆಗೆ ಹಾರಬೇಕು ಎಂಬ ಪದ ಬಸವಣ್ಣನವರೊಬ್ಬ ಪಲಾಯನವಾದಿ ಎಂಬರ್ಥ ಕಲ್ಪಿಸುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರೆ ಕೆಲವರು ಬಸವಣ್ಣನವರನ್ನು ಹೇಡಿಗಳ ರೀತಿ ಬಿಂಬಿಸುವ ಯತ್ನ ಯತ್ನಾಳರ ಮಾತಿನಲ್ಲಡಗಿದೆ ಎಂದು ಟೀಕಿಸಿದ್ದಾರೆ. ಯತ್ನಾಳರ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಮಾಡುವ ಅವಮಾನ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಯತ್ನಾಳ ಮಾತಿನ ವೇಗದಲ್ಲಿ ಹಾಗೆ ಹೇಳಿರಬಹುದೆಂದು ಪ್ರತಿಕ್ರಿಯಿಸಿದರೆ ಖುದ್ದು ಯತ್ನಾಳ ಅವರೇ ಮಾತಿನ ವೇಗದಲ್ಲಿ ಅಲ್ಲ ಸ್ಪಷ್ಟತೆಯಿಂದಲೇ ಹೇಳಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಯತ್ನಾಳರ ಹೇಳಿಕೆಯಿಂದ ಬಸವವಾದಿಗಳು ಅಸಮಾಧಾನ ಮತ್ತು ಆಕ್ರೋಶ ಹೊರಹಾಕತೊಡಗಿದ್ದಾರೆ.

ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಯತ್ನಾಳ ಹೇಳಿಕೆ ಉಲ್ಲೇಖಿಸಿ…..

ಮುಸ್ಲಿಂರಿಗೆ ಮತದಾನದ ಹಕ್ಕು ಬೇಡ, ಸ್ವಾಮೀಜಿ ಮೇಲೆ ಎಫ್ ಐಆರ್ ದಾಖಲು, ಶಾಸಕ ಯತ್ನಾಳ ಏನಂದ್ರು?

ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಹಗುರವಾಗಿ ಮಾತನಾಡಿರುವ ಯತ್ನಾಳ ಕ್ಷಮಿಸಲಾರದ ತಪ್ಪೆಸಗಿದ್ದಾರೆ. ಕಾಂಗ್ರೆಸ್‌ ನಾಯಕರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಗರ ನಾಲಿಗೆಗಳು ಈಗ ಸಮಾಜದ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ. ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯಾನವಾದಿ ಎಂಬರ್ಥದಲ್ಲಿ ಮಾತನಾಡಿದ ಯತ್ನಾಳ ಅವರನ್ನು ಈ ನಾಡಿನ ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕಿದೆ ಎಂದಿದ್ದಾರೆ.

ಬಸವಣ್ಣನವರು ಹೊಳೆಗೆ ಹಾರಿಲ್ಲ. ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ. ಯತ್ನಾಳ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆಗೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಇಂದು ಯತ್ನಾಳ್‌ ಅವರು ಪ್ರತಿಪಾದಿಸುತ್ತಿರುವ ಸಿದ್ಧಾಂತವೇ ಅಂದು ಬಸವಾದಿ ಶರಣರನ್ನು ಹಿಂಸಿಸಿದ್ದಲ್ಲವೇ? ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು “ಮರಣವೇ ಮಹಾನವಮಿ“ ಎಂದಿದ್ದೇಕೆ? ವಚನ ಬಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು?

ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ? ಯಾರಿಂದ ರಕ್ಷಣೆ ಪಡೆಯಲು? ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ? ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಇಂದು ನಾವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದೇವೆ. ಅವರ ತತ್ವಗಳ ಪ್ರೇರಣೆಯಲ್ಲೇ ನಮ್ಮ ಸಂವಿಧಾನವಿದೆ. ಧಮನಿತರಿಗೆ ಆತ್ಮಶಕ್ತಿ ನೀಡಿದ, ಶೋಷಿತರಿಗೆ ಘನತೆಯ ಬದುಕು ತಂದುಕೊಟ್ಟ, ಕಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ “ಹೊಳೆ ಹಾರಿದವರಾಗಿ” ಕಂಡಿದ್ದು ಬಿಜೆಪಿಗರ ಅಜ್ಞಾನದ ದ್ಯೋತಕವಾಗಿದೆ. ಬಸವಣ್ಣರನ್ನು ಅನುಸರಿಸುವ ಈ ನಾಡಿನ ಜನ ಬಿಜೆಪಿಗರ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ಕರ್ನಾಟಕದ ಜನರಿಗಿದೆ ಎಂದಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!