ವಿಜಯಪುರದ ಬಟ್ಟೆ ವ್ಯಾಪಾರಿಗೆ ವಂಚನೆ, ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಮಾಲೀಕ….ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
ಸರಕಾರ ನ್ಯೂಸ್ ವಿಜಯಪುರ
‘ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣದ ಜತೆಗೆ ಪ್ರತಿಶತಃ 200 ಲಾಭಾಂಶ ನೀಡುವುದಾಗಿ’ನಂಬಿಸಿ ಬಟ್ಟೆ ವ್ಯಾಪಾರಿಯನ್ನು ವಂಚನೆಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರದ ಮಹಾವೀರ ಕಾಲನಿಯ ವಿಶಾಲಕುಮಾರ ರವೀಂದ್ರ ಜೈನ್ ಎಂಬುವರು ಮೋಸಕ್ಕೆ ಒಳಗಾಗಿದ್ದು, ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ವೈಶಾಲಿ ಸಾರೀಸ್ ಹೆಸರಿನಲ್ಲಿ ಬಟ್ಟೆ ವ್ಯಾಪಾರ ನಡೆಸುವ ವಿಶಾಲಕುಮಾರ ವಂಚಕರ ಜಾಲಕ್ಕೆ ಸಿಲುಕು ಬರೋಬ್ಬರಿ 59,12,765 ರೂಪಾಯಿ ಕಳೆದುಕೊಂಡಿದ್ದಾರೆ.
ಪ್ರಕರಣದ ವಿವರ:
‘ಫಂಡ್‌ಬೇಸ್-5’ ಎಂಬ ವಾಟ್ಸ್‌ಆ್ಯಪ್ ಗುಂಪಿಗೆ ಬಂದ ಸಂದೇಶಗಳನ್ನು ನಂಬಿದ ವಿಶಾಲಕುಮಾರ ಅದರಲ್ಲಿ ಲಾಭಾಂಶದ ವಿವರ ನೋಡಿ ಹಣ ಹೂಡಿಕೆ ಮಾಡುವ ಮನಸ್ಸು ಮಾಡಿದ್ದಾರೆ. ವಾಟ್ಸಪ್ ಗುಂಪಿನಲ್ಲಿ ವ್ಯಕ್ತಿಯೊಬ್ಬ ತಮ್ಮದು ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ನೋಂದಾಯಿತ ಕಂಪನಿಯಾಗಿದ್ದು, ಯಾವುದೇ ವಂಚನೆಯಿಲ್ಲದಂತೆ ಹೂಡಿಕೆದಾರರಿಗೆ ಲಾಭಾಂಶ ಒದಗಿಸಿಕೊಡುವ ಉದ್ದೇಶ ಹೊಂದಿದೆ. ಜಗತ್ತಿನ ನಾನಾ ಭಾಗಗಳಲ್ಲಿ ನಮ್ಮ ಶಾಖೆಗಳಿದ್ದು, ಭಾರತದಲ್ಲೂ ನಮ್ಮ ಪ್ರತಿನಿಧಿಗಳು ತಮಗೆ ಸಹಕರಿಸಲಿದ್ದಾರೆ ಎಂಬಿತ್ಯಾದಿ ಕಂಪನಿ ಸಂಬಂಧಿತ ವಿವರ ನೀಡಿದ್ದಾರೆ. ಮಾತ್ರವಲ್ಲ, ವಾಟ್ಸ್‌ಆ್ಯಪ್ ಗುಂಪನಿಲ್ಲಿದ್ದವರೂ ಸಹ ಪ್ರತಿಕ್ರಿಯಿಸುತ್ತಾ ತಮಗೂ ಲಾಭಾಂಶ ಸಿಕ್ಕಿದ್ದಾಗಿ ತಿಳಿಸಲಾಗಿ ಅದನ್ನು ವಿಶಾಲಕುಮಾರ ನಂಬಿದ್ದಾರೆ. ಆರಂಭದಲ್ಲಿ 2ಸಾವಿರ ರೂಪಾಯಿ ಹೂಡಿಕೆ ಮಾಡಿದ್ದು, 2720 ರೂಪಾಯಿ ಬಂದಿದೆ. ಬಳಿಕ ಒಮ್ಮೆಲೆ 1 ಲಕ್ಷ ರೂಪಾಯಿ ಹಣ ಸಂದಾಯ ಮಾಡುತ್ತಾರೆ. ಆ ಪ್ಲಾನ್‌ಗೆ ಅರ್ಹತೆ ಪಡೆಯಲು 6.96 ಲಕ್ಷ ಹಾಕಬೇಕೆಂದು ತಿಳಿಸಲಾಗಿ ಅದನ್ನೂ ಪಾಲಿಸುತ್ತಾರೆ. ನಂತರ ಹಂತ ಹಂತವಾಗಿ 59 ಲಕ್ಷಕ್ಕೂ ಅಧಿಕ ಹಣ ವಂಚಿಸಿ ಲಾಭಾಂಶವೂ ನೀಡದೆ, ಹೂಡಿಕೆ ಮಾಡಿದ್ದ ಹಣವೂ ನೀಡದೇ ವಂಚಿಸಿದ್ದಾರೆ.
ದೂರು ದಾಖಲು:
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಎಸ್‌ಪಿ ಭಗವಾನ ಋಷಿಕೇಶ ಸೋನವಾನೆ ಅವರು ತನಿಖಾ ತಂಡ ರಚಿಸಿದ್ದಾರೆ. ಸಿಪಿಐ ರಮೇಶ ಅವಜಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಲಹೆ ಸೂಚನೆ ಮತ್ತು ಮಾರ್ಗದರ್ಶನದ ಮೇಲೆ ತನಿಖಾ ತಂಡ ವಂಚಕರ ಪತ್ತೆಗೆ ಜಾಲ ಬೀಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)