ವಿಜಯಪುರದ ಪಿಡಿಒಗೆ ರಾಜ್ಯಮಟ್ಟದ ಪ್ರಶಸ್ತಿ, ನರೇಗಾದಲ್ಲಿ ಅನುಪಮ ಸಾಧನೆ, ಅಷ್ಟಕ್ಕೂ ಆ ಪಿಡಿಒ ಯಾರು? ಸಾಧನೆ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್
ವಿಜಯಪುರ: ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಇಂಡಿ ತಾಲೂಕಿನ ತೆನಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ 2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗ್ರಾಮೀಣ ಜನರ ಬದುಕಿನ ಭರವಸೆಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆ ಈ ಪ್ರಶಸ್ತಿ ನೀಡಲಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ನಡೆದ ನರೇಗಾ ಹಬ್ಬ-2022ರಲ್ಲಿ ಪ್ರಶಸ್ತಿ ವಿತರಿಸಿ ಗೌರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ ಅತೀಕ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾ ನಾಗ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ವಿಜಯಪುರ ಜಿಪಂ ಸಿಇಒ ರಾಹುಲ್ ಶಿಂಧೆ ಭಾಗವಹಿಸಿದ್ದರು.
ಎನ್‌ಆರ್‌ಇಜಿ ಸಾಧನೆ:
ತೆನ್ನಿಹಳ್ಳಿ ಗ್ರಾಮ ಪಂಚಾಯಿತಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಸ್ಥಳೀಯ ಅಕುಶಲ ಕಾರ್ಮಿಕರಿಗೆ ಕೆಲಸ ಒದಗಿಸಿರುವುದು ಕೋವಿಡ್ ನಂತಹ ಸಂಕಷ್ಟದ ಪರಿಸ್ಥತಿಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗಿದೆ.
ತೆನ್ನಿಹಳ್ಳಿ ಗ್ರಾಮ ಪಂಚಾಯಿತಿಗೆ 2021-2022 ನೇ ಸಾಲಿನಲ್ಲಿ 26,098 ಮಾನವ ದಿನಗಳ ಗುರಿಗೆ ಅನುಗುಣವಾಗಿ 61,370 ಮಾನವ ದಿನಗಳನ್ನು ಸೃಜನೆ ಮಾಡುವುದರ ಮುಖಾಂತರ ಶೇ. 100 ಕ್ಕಿಂತ ಹೆಚ್ಚು ಗುರಿ ಸಾಧನೆ ಮಾಡಿದ್ದಾರೆ.
ಮಹಿಳಾ ಭಾಗವಹಿಸುವಿಕೆಯು 47.74 ಪ್ರತಿಶತ ಇದೆ. ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯ ಇಲಾಖೆಯಡಿ ನೆಡುತೋಪುಗಳು, ದನ, ಕುರಿ ಶೆಡ್ಡು, ಪೌಷ್ಠಿಕ ಕೈತೋಟ, ಜಾನುವಾರು ಕುಡಿಯುವ ನೀರಿನ ತೊಟ್ಟಿ, ಬಾಂದಾರ, ಹಳ್ಳ ಹೂಳೆತ್ತುವುದು, ಶಾಲಾ ಶೌಚಾಲಯ, ಶಾಲಾ ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ಶಾಲಾ ಕಂಪೌಂಡ್, ಶಾಲಾ ಶೌಚಾಲಯ, ಸರ್ಕಾರಿ ಶಾಲೆಗೆ ಬಿಸಿಯೂಟದ ಅಡುಗೆ ಕೋಣೆ, ಮಕ್ಕಳ ಬಿಸಿಯೂಟಕ್ಕೆ ಅನುಕೂಲಕರವಾದ ಪೌಷ್ಟಿಕ ಆಹಾರ ಕೈತೋಟ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಿ ಪಿಡಿಒ ಬಬಲಾದಿ ಯಶಸ್ವಿಯಾಗಿದ್ದಾರೆ.
ತ್ಯಾಜ್ಯ ನಿರ್ವಹಣೆ:
ತೆನಿಹಳ್ಳಿ ಗ್ರಾಮ ಪಂಚಾಯಿತಿಗೆ ಸ್ವಚ್ಚ ಭಾರತ ಮಿಷನ್(ಗ್ರಾ) ಯೋಜನೆಯಡಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡಲು ಸರ್ಕಾರವು ಮೂರು ಎಕರೆ ಜಾಗದ ಮಂಜೂರು ಮಾಡಿದ್ದು, ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಂದಾಜು 3 ಲಕ್ಷ ವೆಚ್ಚದಲ್ಲಿ ವಿವಿಧ ಬಗೆಯ ಸಸಿಗಳಾದ ಬೇವು, ಹೊಂಗೆ, ಆಲ, ಅರಳಿ, ಮಹಾಗಣಿ, ಚರಿ ಇತ್ಯಾದಿ ಸುಮಾರು 25 ಜಾತಿಯ 900 ಸಸಿಗಳನ್ನು ನೆಡಲಾಗಿದೆ. ಸಸಿಗಳ ನಿರ್ವಹಣೆಗಾಗಿ 15 ನೇ ಹಣಕಾಸು ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ ಹನಿ ನೀರಾವರಿ ಮುಖಾಂತರ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೆ ಅಲ್ಲದೆ ಸಸಿಗಳ ಸುರಕ್ಷತೆಗಾಗಿ ಸುತ್ತಲು ತಂತಿ ಬೇಲಿ ಅಳವಡಿಸಲಾಗಿದೆ. ಸಸಿಗಳ ನಿರ್ವಹಣೆಗಾಗಿ ಮಹಿಳಾ ಕೂಲಿ ಕಾರ್ಮಿಕರನ್ನು ನೇಮಿಸಲಾಗಿದೆ. ಇದರಿಂದ ಅಕುಶಲ ಕಾರ್ಮಿಕರಿಗೆ ಸ್ಥಳಿಯವಾಗಿ ಉದ್ಯೋಗ ದೊರತಿದೆ. ಒಟ್ಟಿನಲ್ಲಿ ಮನೆಗೊಂದು ಮರ ಊರಿಗೊಂದು ವನ ಎಂಬ ಮಾತು ಇಲ್ಲಿ ನಿಜವಾಗಿದೆ.
ವಿಶೇಷವೇನೆಂದರೆ ತೆನ್ನಿಹಳ್ಳಿ ಗ್ರಾಮ ಪಂಚಾಯಿತಿಯು 75 ನೇ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ಕೆಯಾಗಿದೆ. ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿಯಲ್ಲಿ ಎನ್‌ಆರ್‌ಎಲ್‌ಎಂ ಶೆಡ್ ನಿರ್ಮಾಣ, ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಬಿಸಿಯೂಟದ ಕೋಣೆ, ಗೋದಾಮು, ಶಾಲಾ ಕಂಪೌಂಡ ಈ ಎಲ್ಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.