ವಿಜಯಪುರ

ಬಿಜೆಪಿಯಿಂದ ತಳವಾರ ಸಮುದಾಯಕ್ಕೆ ಅನ್ಯಾಯ, ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ, ಸೊನಕನಳ್ಳಿಯಲ್ಲಿ ವಿನೂತನ ಪ್ರತಿಭಟನೆ

ವಿಜಯಪುರ:  ತಳವಾರ ಸಮಯದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅಧಿಕಾರಿಗಳು ಪ್ರವರ್ಗ-1ರಡಿ ನೀಡುತ್ತಿರುವ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ತಳವಾರ ಸಮುದಾಯದ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.

ಇಂಡಿ ತಾಲೂಕಿನ ಸೊನಕನಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮದಡಿ ನ್ಯಾಯಯುತವಾಗಿ ಸಿಗಬೇಕಾದ ಎಸ್‌ಟಿ ಪ್ರಮಾಣ ಪತ್ರದ ಬದಲಾಗಿ ಪ್ರವರ್ಗ-1ರಡಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅಧಿಕಾರಿಗಳ ಈ ದುರುದ್ಧೇಶ ಖಂಡಿಸಿ ಯುವಕರು ಪ್ರತಿಭಟನೆ ನಡೆಸಿದರು.

ಮನೆ ಬಾಗಿಲಿಗೆ ಬಂದ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಕೂಡಲೇ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಲಕಾರಿ ತಳವಾರ ಮಾತನಾಡಿ, ಕಳೆದೊಂದು ವರ್ಷದಿಂದ ಎಸ್‌ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದೇವೆ. ಸರ್ಕಾರ ಕಾಟಾಚಾರಕ್ಕೆ ಸುತ್ತೋಲೆ ಹೊರಡಿಸಿ ಸುಮ್ಮನಾಗುತ್ತಿದೆ. ಅಧಿಕಾರಿಗಳು ದುರುದ್ಧೇಶದಿಂದ ಎಸ್‌ಟಿ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ತೊಂದರೆಗೆ ಸಿಲುಕಿದ್ದೇವೆ. ಹೀಗಾಗಿ ಬಿಜೆಪಿ ಸರ್ಕಾರ ಈ ಕೂಡಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಸ್‌ಟಿ ಪ್ರಮಾಣ ಪತ್ರ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮುದಾಯದ ಯಲ್ಲಪ್ಪ ಕೆ, ಸುರೇಶ ಯ.ತಳವಾರ, ಸಿದ್ದು ಅ. ತಳವಾರ, ಮಹೇಶ ಗೋಳಗಿ, ಚಿದಾನಂದ ವಿ.ಕೆ, ಪರಶುರಾಮ ಜಿ.ಕೆ,  ಭೀರಪ್ಪ ಸಿ. ತಳವಾರ, ಸಿದ್ದು ಬಿ. ಗೋಳಗಿ, ಕುಮಾರ ಗೋಳಗಿ ಮತ್ತಿತರರಿದ್ದರು.

error: Content is protected !!