ವಾರ್ಸಾ ಪ್ರಕಾರ ಹೆಸರು ನೋಂದಾಯಿಸಲು ಲಂಚಕ್ಕೆ ಬೇಡಿಕೆ, ಸರ್ವೇಯರ್ ರವಿ ನಾಯ್ಕ ಎಸಿಬಿ ಬಲೆಗೆ
ವಿಜಯಪುರ: ಸರ್ಕಾರಿ ಕೆಲಸ ದೇವರ ಕೆಲಸ ಎಂಬುದು ಕೇವಲ ಗೋಡೆ ಬರಹಕ್ಕೆ ಸೀಮಿತವಾಗಿದೆ. ಸರ್ಕಾರಿ ಕಚೇರಿಯಲ್ಲಿ ಲಂಚ ಕೊಡದೆ ಕೆಲಸವೇ ಆಗಲ್ಲ ಎಂಬ ಜನಸಾಮಾನ್ಯರ ಆರೋಪಕ್ಕೆ ಸಾಕ್ಷಿ ಎಂಬಂತಿದೆ ಈ ಪ್ರಕರಣ.
ಹೌದು, ಮನೆಯ ಖಾತಾ ಉತಾರೆಯಲ್ಲಿ ವಾರ್ಸಾ ಪ್ರಕಾರ ಹೆಸರು ನೋಂದಾಯಿಸಿಕೊಡಲು ಸರ್ವೇಯರ್ ಲಂಚಕ್ಕೆ ಬೇಡಿಕೆ ಇರಿಸಿ, ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ನಗರ ಭೂಮಾಪನ ಕಚೇರಿಯ ಸರ್ವೇಯರ್ ರವಿ ರಾಮಸಿಂಗ್ ನಾಯ್ಕಎಸಿಬಿ ಬಲೆಗೆ ಬಿದ್ದ ಸರ್ವೇಯರ್.
ಸ್ಥಳೀಯ ಜೆಎಂ ರಸ್ತೆಯ ಬಾಂಗಿ ಗಲ್ಲಿ ನಿವಾಸಿ ಉಮರ ಪಾರೂಕ ಇಮಾಮಸಾಬ ಬಾಂಗಿ ಎಂಬುವರು, ತಮ್ಮ ತಂದೆ ತೀರಿಕೊಂಡಿದ್ದು, ಮನೆಯ ಖಾತೆಯಲ್ಲಿ ವಾರಸಾ ಪ್ರಕಾರ ಹೆಸರು ನೋಂದಣಿಗೆ ಮಾ.14ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನಗರ ಮಾಪನಾ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಸರ್ವೇಯರ್ ರವಿ ಅವರು ಉಮರ ಪಾರೂಕ್ ಸಂಬಂಧಿಕ ನಾಸಿರ್‌ಗೆ ಕರೆ ಮಾಡಿ, ಉಮರ ಪಾರೂಕ್ ಅವರಿಗೆ ಕಚೇರಿಗೆ ಬರುವಂತೆ ತಿಳಿಸಿದ್ದರು. ಅದರಂತೆ ಉಮರ್ ಹಾಗೂ ನಾಸಿರ್ ಕಚೇರಿಗೆ ಬಂದು ವಿಚಾರಿಸಿದಾಗ ತಮ್ಮ ಕೆಲಸ ಮಾಡಿಕೊಡಲು 4 ಸಾವಿರ ರೂ. ಬೇಡಿಕೆ ಇಟ್ಟ ಬಗ್ಗೆ ಎಸಿಬಿ ದೂರು ಸಲ್ಲಿಸಿದ್ದರು. ಸಂಜೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸರ್ವೇಯರ್ ರವಿ 4 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಸಾಕ್ಷ ಸಮೇತ ಬಂಧಿಸಿದ್ದಾರೆ.
ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಮಂಜುನಾಥ ಗಂಗಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಇನ್ಸ್‌ಪೆಕ್ಟರ್‌ಗಳಾದ ಪರಮೇಶ್ವರ ಕವಟಗಿ, ಚಂದ್ರಕಲಾ, ಸಿಬ್ಬಂದಿ ಅಶೋಕ ಸಿಂಧೂರ, ಎ.ಐ.ಶೇಖ್, ಚನ್ನನಗೌಡ ಯಾಳವಾರ, ಮದನಸಿಂಗ ರಜಪೂತ, ಎಸ್.ಎಸ್.ಮುಂಜೆ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ ತಂಡದಲ್ಲಿದ್ದರು.