ವಿಶ್ವ ಶಾಂತಿಗಾಗಿ 18 ಕೋಟಿ ಜಪಯಜ್ಞ, ಲೋಕ ಕಲ್ಯಾಣಾರ್ಥ ಕಾರ್ಯಕ್ರಮ,ಬೆನಕನಳ್ಳಿಯಲ್ಲಿ ಮೊಳಗಲಿದೆ ಶಿವನಾಮ ಮಂತ್ರ
ವಿಜಯಪುರ: ಬೆನಕನಹಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವಯೋಗೀಶ್ವರ ಮಹಾಸ್ವಾಮಿಗಳ ಯೋಗಾನುಷ್ಟಾನದ ಸುವರ್ಣ ಮಹೋತ್ಸವದ ಹಿನ್ನೆಲೆ ಏ. 21, 22ರಂದು 18 ಕೋಟಿ ಜಪ ಯಜ್ಞ ಹಮ್ಮಿಕೊಳ್ಳಲಾಗಿದೆ.
ಜಂಬಗಿ (ಆ) ಗ್ರಾಮದವರಾದ ಪರಮ ಪೂಜ್ಯ ಶಿವಯೋಗೀಶ್ವರರು 1968 ಅ. 10 ರಿಂದ 1970 ಏ.23ರವರೆಗೆ ಯೋಗಾನುಷ್ಟಾನಕ್ಕೆ ಕುಳಿತಿದ್ದರು. ಬಂಥನಾಳದ ಸಂಗನಬಸವ ಶ್ರೀಗಳು ಹಾಗೂ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಶ್ರೀಗಳು ಬಂದು ಬೃಹತ್ ಕಾರ್ಯಕ್ರಮ ನೆರವೇರಿಸಿ ಅನುಷ್ಟಾನಕ್ಕೆ ಮಂಗಲ ಕೋರಿದ್ದರು. ಇದೀಗ ಆ ಸುವರ್ಣ ಘಳಿಗೆಗೆ 52 ವರ್ಷ ತುಂಬಿದ ಕಾರಣ ಜಪ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಪೂಜ್ಯ ಅಡವಿಲಿಂಗ ಮಹಾರಾಜರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಮಾತನಾಡಿ, ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಭವ್ಯ ಮಂಟಪ ನಿರ್ಮಿಸಲಾಗುತ್ತಿದ್ದು, ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ನಾಡಿನ ನಾನಾ ಭಾಗಗಳಿಂದ ಪೂಜ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಈ ಧರ್ಮ ಸಭೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಕಾರ್ಯಕ್ರಮ ಯಶಸ್ಸಿಗೆ ತನು ಮನ ಧನದಿಂದ ಸಹಾಯ ಮಾಡಬೇಕೆಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಇಂಥ ಕಾರ್ಯಕ್ರಮವನ್ನು ಎಲ್ಲರೂ ಸಾಕ್ಷೀಕರಿಸಬೇಕೆಂದರು.
ಕೊಲ್ಹಾರದ ಪೂಜ್ಯ ಕಲ್ಲಿನಾಥ ಸ್ವಾಮೀಜಿ, ಮುಖಂಡ ಶೀಲವಂತ ಉಮರಾಣಿ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.