ಖೋಟಾ ನೋಟು ಮುದ್ರಣ ಪ್ರಕರಣ, ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ, ಎಲ್ಲಿ? ಯಾರು ಆ ಅಪರಾಧಿ?
ಸರಕಾರ ನ್ಯೂಸ್ ವಿಜಯಪುರ
ಖೋಟಾ ನೋಟು ಮುದ್ರಣ ಮಾಡಿ ಚಲಾಯಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 90 ಸಾವಿರ ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಕಲ್ಲಪ್ಪ ಸುಭಾಸ ಹರಿಜನ ಶಿಕ್ಷೆಗೆ ಗುರಿಯಾಗಿದ್ದಾನೆ. ಇಂಡಿ ಪಟ್ಟಣದ ವಿಜಯಪುರ ರಸ್ತೆಯ ನೂರಾನಿ ನಗರದಲ್ಲಿ ವಾಸವಾಗಿದ್ದ ಈತ ಖೋಟಾ ನೋಟು ಪ್ರಿಂಟ್ ಮಾಡುವ ಉದ್ದೇಶದಿಂದ ಎಪ್ಸಾನ್ ಕಂಪನಿಯ ಝರಾಕ್ಸ್ ಕಂ ಪ್ರಿಂಟರ್ ಮಶಿನ್ ಇಟ್ಟುಕೊಂಡಿದ್ದನು. ಸುಮಾರು 5000 ರೂ.ಗಳಷ್ಟು 200 ರೂ. ಮತ್ತು 100 ರೂ.ಮುಖಬೆಲೆಯ ಭಾರತೀಯ ಕರೆನ್ಸಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆ ಮಾಡಿದ್ದಲ್ಲದೇ ಚಲಾವಣೆ ಮಾಡುವ ಉದ್ದೇಶದಿಂದ 200 ರೂ.ಮುಖಬೆಲೆಯ ನಾಲ್ಕು ಖೋಟಾ ನೋಟುಗಳ ಮತ್ತು 100 ರೂ.ಮುಖಬೆಲೆಯ ನಾಲ್ಕು ಖೋಟಾ ನೋಟುಗಳನ್ನು ಇರಿಸಿಕೊಂಡಿದ್ದನು.
2019 ಮಾ.9 ರಂದು ಸ್ಕಾರ್ಪಿಯೋ ಜೀಪ್‌ನಲ್ಲಿ ಹಿರೇರೂಗಿಯಿಂದ ಇಂಡಿ ಕಡೆಗೆ ಬರುತ್ತಿದ್ದಾಗ ಇಂಟಿ ಪಟ್ಟಣದ ನ್ಯೂ ಕಾವೇರಿ ಡಾಬಾ ಹತ್ತಿರ ಪೊಲೀಸರು ದಾಳಿ ನಡೆಸಿದ್ದರು. ಪಂಚನಾಮೆ ವೇಳೆ ಮನೆಯಲ್ಲಿ 100 ರೂ.ಮುಖಬೆಲೆಯ 120 ಖೋಟಾ ನೋಟುಗಳು ಹಾಗೂ ಪ್ರಿಂಟರ್, ಝರಾಕ್ಸ್ ಯಂತ್ರ, ಖೋಟಾ ನೋಟುಗಳ ಬಾರ್ಡ್‌ರ್ ಕಟ್ ಮಾಡುವ ಕತ್ತರಿ ಮತ್ತಿತರ ಸಲಕರಣೆಗಳು ಸಿಕ್ಕಿದ್ದವು. ಈ ಬಗ್ಗೆ ಸಿಪಿಐ ಎಚ್.ಎಂ. ಪಾಟೀಲ ತನಿಖೆ ನಡೆಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ. ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.