ಭೀಮಾತೀರದಲ್ಲೊಂದು ಬಿಗ್ ದರೋಡೆ, ವಿಮಲ್ ಗುಟಕಾ ತುಂಬಿದ ಗೂಡ್ಸ್ ಅಪಹರಣ, ಸೇಲ್‌ಟ್ಯಾಕ್ಸ್ ಆಫೀಸರ್ ಹೆಸರಲ್ಲಿ ನಡೆದ ಬೆಚ್ಚಿ ಬೀಳಿಸೋ ಕೃತ್ಯದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ….!
ಸರಕಾರ ನ್ಯೂಸ್ ವಿಜಯಪುರ
ಒಂದಲ್ಲ ಎರಡಲ್ಲ…ಬರೋಬ್ಬರಿ 14.88 ಲಕ್ಷ ರೂಪಾಯಿ ಮೌಲ್ಯದ ವಿಮಲ್ ಪಾನ್ ಮಸಾಲಾ ಗುಟಖಾ ತುಂಬಿದ ಗೂಡ್ಸ್ ವಾಹನ ಅಪಹರಣಗೈದ ಕುತೂಹಲದ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ !
ಸೇಲ್ಸ್ ಟ್ಯಾಕ್ಸ್ ಆಫೀಸ್‌ರ ಎಂದು ಹೇಳಿ ವಿಮುಲ್ ತುಂಬಿದ ಗೂಡ್ಸ್ ವಾಹನ ಅಪಹರಣಗೈದು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವೇಗವಾಗಿ ಹೊರಟಿದ್ದ ವಾಹನ ಮಾಲೀಕನ ಚಾಲಾಕಿತನ ಹಾಗೂ ಪೊಲೀಸರ ಕಾರ್ಯದಕ್ಷತೆಯಿಂದ ಕೊನೆಗೂ ಕೈವಶವಾಗಿದೆ. ಅಂದ ಹಾಗೆ ದರೋಡೆಕೋರರ ಹೆಸರು ಕೂಡ ಪತ್ತೆಯಾಗಿದ್ದು, ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ? ಹೇಗಾಯಿತು?
ಬೀಳಗಿ ತಾಲೂಕಿನ ಗಲಗಲಿಯ ಮಲ್ಲಿಕಾರ್ಜುನ ಚೆನಪ್ಪ ಪಟ್ಟಣಶೆಟ್ಟಿ ಎಂಬುವರು ವಿಮಲ್ ಗುಟಕಾ ಪಾನ್ ಮಸಾಲಾ ವ್ಯಾಪಾರ ಮಾಡಿಕೊಂಡಿದ್ದಾರೆ. ಇವರದ್ದೊಂದು ಗೂಡ್ಸ್ ವಾಹನವಿದ್ದು, ಪುಣ್ಯಕ್ಕೆ ಅದಕ್ಕೊಂದು ಜಿಪಿಎಸ್ ಅಳವಡಿಸಿದ್ದಾರೆ. ಈ ವಾಹನದ ಮೇಲೆ ಶಿವಪ್ಪ ಪರಸಪ್ಪ ಹನಮರ ಎಂಬಾತ 4-5 ವರ್ಷಗಳಿಂದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಅಲ್ಲದೇ, ಮಲ್ಲಿಕಾರ್ಜುನನ ಕಿರಾಣಿ ಅಂಗಡಿಯಲ್ಲಿ ಅಡಿವೇಶ ಹಣಮಂತ ಹಲಗಣಿ ಹಾಗೂ ಮಲಕಾರಿ ರಾಮಣ್ಣ ಗೊರಗೊಳ ಕೆಲಸ ಮಾಡುತ್ತಿದ್ದು, ಈ ಮೂವರು ಸೇರಿ ಆಗಾಗ ಮಾಲು ತರಲೆಂದು ವಿಜಯಪುರಕ್ಕೆ ಹೋಗುತ್ತಿದ್ದರು.
ನ. 30ರಂದು ಬೆಳಗ್ಗೆ 7ರ ಸುಮಾರಿಗೆ ಮೂರು ವಿಮಲ್ ಗುಟಖಾ ಬಂಡಲ್ ತರಲು ವಿಜಯಪುರಕ್ಕೆ ತೆರಳಿದ್ದ ಇವರು ರಾತ್ರಿ 8.45ರ ಸುಮಾರಿಗೆ ಸಾರವಾಡ ಮಾರ್ಗವಾಗಿ ಹೊರಟಿರುವುದು ಜಿಪಿಎಸ್ ಮೂಲಕ ಗೊತ್ತಾಗಿತ್ತು. ತಪ್ಪಾದ ಮಾರ್ಗದಲ್ಲಿ ಹೋಗುತ್ತಿದ್ದಾರೆಂದು ಮಲ್ಲಿಕಾರ್ಜುನ ಗೂಡ್ಸ್ ಚಾಲಕ ಶಿವಪ್ಪಗೆ ಫೋನ್ ಮಾಡಿದರೆ ಮೊಬೈಲ್ ಸ್ವಿಚ್ಛ ಆಫ್ ಆಗಿತ್ತು. ಅಡಿವೇಶ ಮತ್ತು ಮಲಕಾರಿ ಕೂಡ ಫೋನ್ ಎತ್ತಲಿಲ್ಲ.
ಕಂಟ್ರೋಲ್ ರೂಮ್‌ಗೆ ಮಾಹಿತಿ:
ಸ್ವಲ್ಪ ಸಮಯದ ಬಳಿಕ ಗೂಡ್ಸ್ ವಾಹನ ವಿಜಯಪುರ ದಾಟಿ ಸೋಲಾಪುರ ಹೈವೇ ಮೂಲಕ ವೇಗವಾಗಿ ಹೋಗುತ್ತಿರುವುದನ್ನು ಜಿಪಿಎಸ್ ಮೂಲಕ ಗಮನಿಸಿದ ಮಾಲೀಕ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ನಂತರ ರಾತ್ರಿ 10ರ ಸುಮಾರಿಗೆ ಝಳಕಿ ಪೊಲೀಸರು ಫೋನ್ ಮಾಡಿ ಗೂಡ್ಸ್ ವಾಹನ ಗುಟಕಾ ಬಂಡಲ್ ಸಮೇತ ಹಿಡಿದಿರುವುದಾಗಿ ಕರೆ ಮಾಡಿದ್ದಾರೆ. ಕೂಡಲೇ ಮಲ್ಲಿಕಾರ್ಜುನ ಸ್ಥಳಕ್ಕೆ ಧಾವಿಸಲಾಗಿ ಅದನ್ನು ತೆಗೆದುಕೊಂಡು ಹೋದ ಇಬ್ಬರು ಇದ್ದರು. ಆದರೆ, ಚಾಲಕ ಮತ್ತು ಕೆಲಸಗಾರರು ಇರಲಿಲ್ಲ.
ತೇರಾಮೈಲ್ ಬಳಿ ಪತ್ತೆ:
ವಿಜಯಪುರದ ಬಟ್ಟೆ ವ್ಯಾಪಾರಿಗೆ ವಂಚನೆ, ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಮಾಲೀಕ….ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
ರಾತ್ರಿ 12 ಗಂಟೆ ಸುಮಾರಿಗೆ ಮಲಕಾರಿ ಫೋನ್ ಮಾಡಿ ತಮ್ಮನ್ನು ತೇರಾಮೈಲ್ ಬಳಿ ಇಳಿಸಿ ಅಪಹರಣ ಕಾರರು ಗೂಡ್ಸ್ ವಾಹನ ತೆಗೆದುಕೊಂಡು ಹೋಗಿದ್ದಾಗಿ ತಿಳಿಸಿದರು. ಕೂಡಲೇ ಅಲ್ಲಿಗೆ ತೆರಳಿ ಅವರನ್ನು ಕರೆದುಕೊಂಡು ಬಂದು ವಿಚಾರಿಸಲಾಗಿ, ಅಪಹರಣದ ವಿವರ ಬಿಚ್ಚಿಟ್ಟರು.
ಅವರು ಹೇಳಿದ ಪ್ರಕಾರ, ಶಾಕೀರ್ ಏಜೆನ್ಸಿಯಲ್ಲಿ 60 ಗುಟಕಾ ಬಂಡಲ್ ಲೋಡ್ ಮಾಡಿಕೊಂಡು ವಿಜಯಪುರ ರೈಲ್ವೆ ಬ್ರಿಜ್ ಮೇಲೆ ಹಾಯ್ದು ಜಮಖಂಡಿ ಮಾರ್ಗವಾಗಿ ಹೊರಟಿದ್ದ ಸಂದರ್ಭ ಸಾರವಾಡ ಸೇತುವೆ ದಾಟಿ ಹಂಪ್ಸ್ ಬಳಿ ವಾಹನ ನಿಧಾನಗೊಳಿಸಿದಾಗ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರ್ ಬಂದು ತಮ್ಮ ಗಾಡಿಗೆ ಅಡ್ಡ ನಿಲ್ಲಿಸಿದ್ದು, ಸ್ವಲ್ಪ ಸಮಯದ ನಂತರ ಕೆಂಪು ಬಣ್ಣದ ಕಾರ ಕೂಡ ಬಂದಿದ್ದು, ಇನ್ನೋವಾ ಕಾರ್‌ನಲ್ಲಿದ್ದ 6 ಜನ ಬಂದು ತಾವು ಸೇಲ್ಸ್ ಟ್ಯಾಕ್ಸ್ ಆಫೀಸರ್ ಇದ್ದು ವಾಹವನ್ನು ಚೌಕಿಗೆ ತೆಗೆದುಕೊಂಡು ನಡೆಯಿರಿ ಎಂದಿದ್ದಾರೆ. ತಮ್ಮ ಜೊತೆಗಿದ್ದ ಇಬ್ಬರಿಗೆ ಗೂಡ್ಸ್ ವಾಹನ ತೆಗೆದುಕೊಂಡು ಬರುವಂತೆ ತಿಳಿಸಿ ನಮ್ಮ ಮೊಬೈಲ್ ಕಸಿದುಕೊಂಡು ಮೂವರನ್ನೂ ಇನ್ನೋವಾ ಕಾರ್‌ನಲ್ಲಿ ಕರೆದುಕೊಂಡು ಹೊರಟಿದ್ದಾರೆ. ಕಾರ್ ವಿಜಯಪುರ ದಾಟಿ ಸೋಲಾಪುರದತ್ತ ಹೊರಟಾಗ ಸಂಶಯ ಬಂದು ಕೇಳಲಾಗಿ ಮುಂದೆ ಚೌಕಿ ಇದೆ ಸಾಹೇಬರು ಇದ್ದಾರೆಂದು ಹೇಳಿ ಕರೆದುಕೊಂಡು ಹೊರಟೇ ಬಿಟ್ಟರು. ಎಷ್ಟೇ ವಿನಂತಿಸಿದರೂ ಬಿಡದೇ ಝಳಕಿ ದಾಟಿ ಸೋಲಾಪುರ-ಪುಣೆ ರಸ್ತೆಯ ಹತ್ತಿರ ಹೋಗಿ ಮರಳಿ ವಿಜಯಪುರದತ್ತ ಬಂದರು. ರಾತ್ರಿ 12ರ ಸುಮಾರಿಗೆ ತೇರಾಮೈಲ್ ಬಳಿ ಇಳಿಸಿ ಹೋದರೆಂದು ತಿಳಿಸಿದರು. ಬಳಿಕ ಮಾಲೀಕ ಅವರಿಗೆ ಊಟ ಮಾಡಿಸಿ ಸಮಾಧಾನ ಹೇಳಿದ್ದಾನೆ.
ಪ್ರಕರಣ ದಾಖಲು:
ಪೊಲೀಸ್ ಠಾಣೆಗೆ ಹೋಗಿ ವಾಹನ ತೆಗೆದುಕೊಂಡು ಬಂದಿದ್ದ ಇಬ್ಬರನ್ನು ವಿಚಾರಿಸಲಾಗಿ ಅವರು ಸೋಲಾಪುರದ ಸಾಗರ ಮಲ್ಲಿಕಾರ್ಜುನ ಮೇತ್ರಿ, ಮೋಸ್ಸಿನ್ ಅಬ್ದುಲ್ ರಜಾಕ್ ಶೇಖ ಎಂಬುದಾಗಿ ಗೊತ್ತಾಗಿದ್ದು, ತಮಗೆ ಆದಮ ಮುಲಾನಿ, ರಸೂಲ್ ಶೇಖ ಇವರು ತಮ್ಮ ಜೊತೆಯಲ್ಲಿ ಇನ್ನೂ 3-4 ಜನರಿಗೆ ತಮ್ಮ ಸಂಗಡ ಇನ್ನೋವಾಕಾರ್ ಮತ್ತು ಸ್ವಿಫ್ಟ್ ಕಾರ್ ತೆಗೆದುಕೊಂಡು ಬಂದಿದ್ದು, ತಮಗೆ ಗುಟಕಾ ಲೋಡ್ ಇರುವ ವಾಹನ ತೆಗೆದುಕೊಂಡು ಬರಲು ಹೇಳಿ ಹೋದರು. ತಾವು ರಾತ್ರಿ ಝಳಕಿಯಲ್ಲಿಯೇ ಇದ್ದುದ್ದಾಗಿ ತಿಳಿಸಿದರು.
ಇಷ್ಟೆಲ್ಲಾ ಸುದೀರ್ಘ ಘಟನೆ ಬಳಿಕ ಮಲ್ಲಿಕಾರ್ಜನ ಬಬಲೇಶ್ವರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.