ಅಥರ್ಗಾ- ಹೋರ್ತಿ ಹೋಬಳಿಯಾಗುವುದೇ? ಶಾಸಕ ಯಶವಂತರಾಯಗೌಡ ಮುಂದಾಲೋಚನೆ ಏನು?
ಸರಕಾರ ನ್ಯೂಸ್ ವಿಜಯಪುರ
ಇಂಡಿ ತಾಲೂಕಿನ ಅಥರ್ಗಾ ಮತ್ತು ಹೋರ್ತಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರ ಸಂಕಷ್ಟಗಳನ್ನು ಅರಿತ ಶಾಸಕ ಯಶವಂತರಾಯಗೌಡ ಪಾಟೀಲ ಆ ಎರಡೂ ಗ್ರಾಮಗಳನ್ನು ಹೋಬಳಿ ಮಾಡುವ ನಿಟ್ಟಿನಲ್ಲಿ ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಈ ಬಗ್ಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಾಡಿರುವ ಅವರು, ಹೋರ್ತಿ ಮತ್ತು ಅಥರ್ಗಾ ಇಂಡಿ ತಾಲೂಕಿನ ಅತೀ ದೊಡ್ಡ ಗ್ರಾಮಗಳಾಗಿವೆ. ಈ ಎರಡೂ ಗ್ರಾಮಗಳ ಸುತ್ತಲಿನ ಜನ ಸರ್ಕಾರಿ ಸೇವೆಗಳಿಗಾಗಿ ಅಲೆದಾಡುವಂತಾಗಿದೆ.
ದೂರದ ಬಳ್ಳೊಳ್ಳಿ ಹಾಗೂ ಇಂಡಿ ಕೇಂದ್ರಗಳಿಗೆ ಅಲೆದಾಡಬೇಕಿದೆ. ಹೀಗಾಗಿ ಈ ಎರಡೂ ಗ್ರಾಮಗಳನ್ನು ಹೋಬಳಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ರಾಜ್ಯದಲ್ಲಿ ಒಟ್ಟು 770 ಹೋಬಳಿ ಕೇಂದ್ರಗಳಿವೆ. ಸದ್ಯಕ್ಕೆ ಹೊಸ ಹೋಬಳಿ ರಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅಥರ್ಗಾ ಹಾಗೂ ಹೊರ್ತಿ ಗ್ರಾಮಗಳನ್ನು ಹೋಬಳಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕೋರಿಕೆಗಳು ಬಂದಿವೆ. ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ಹೋಬಳಿಯಿಂದೇನು ಪ್ರಯೋಜನ?
ಹೊಸದಾಗಿ ಹೋಬಳಿ ರಚಿಸಲು ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹೊಸ ಹೋಬಳಿ ರಚಿಸಲಾಗುತ್ತದೆ.
ಪ್ರತಿ ಹೋಬಳಿಗೆ ನಾಡಕಚೇರಿ ಪ್ರಾರಂಭಿಸಬೇಕಾಗುತ್ತದೆ. ಆರಕ್ಷಕ ಠಾಣೆ, ಉಪ ತಹಸೀಲ್ದಾರ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ ಹೀಗೆ ಹತ್ತು ಹಲವು ಕಚೇರಿಗಳು ಪ್ರಾರಂಭವಾಗಲಿವೆ. ಇದರಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳಿಗಾಗಿ ಅಲೆದಾಡುವುದು ತಪ್ಪಲಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)