ವಿಜಯಪುರ ಸಿಂಥೆಟಿಕ್ ಟ್ರ್ಯಾಕ್ ಕಳಪೆ, ಸದನದಲ್ಲಿ ಪ್ರಕಾಶ ರಾಠೋಡ ಆರೋಪ…..
ವಿಜಯಪುರ: ಖ್ಯಾತ ಕ್ರೀಡಾಪಟು, ಕ್ರಿಕೆಟ್ ಆಟಗಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಸದನದಲ್ಲಿ ಕ್ರೀಡಾಪಟುಗಳ ಕಾಳಜಿ ಮೆರೆದಿದ್ದಾರೆ.
ವೆಲೊಡ್ರೊಂ ಕಾಮಗಾರಿ ವಿಳಂಬ, ಕ್ರಿಕೆಟ್ ಕ್ರೀಡಾಂಗಣಕ್ಕೆ ಮೀಸಲಾದ ಸ್ಥಳ ಅನ್ಯ ಇಲಾಖೆಗೆ ಹಸ್ತಾಂತರ, ಸಿಂಥೇಟಿಕ್ ಟ್ರ್ಯಾಕ್ ಕಾಮಗಾರಿ ಕಳಪೆ ಹಾಗೂ ಅಸಮರ್ಪಕ ನಿರ್ವಹಣೆ….ಹೀಗೆ ಹಲವು ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.
ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಸೂಕ್ತ ನಿರ್ವಹಣೆ ಇಲ್ಲದೇ ಈ ಟ್ರ್ಯಾಕ್ ಉಪಯೋಗಕ್ಕೂ ಮುನ್ನವೇ ಹಾಳಾಗುತ್ತಿದೆ. ಪ್ರಾಣಿಗಳು ಸಹ ನುಗ್ಗಿ ಈ ಟ್ರ್ಯಾಕ್ ಹಾಳು ಮಾಡುತ್ತಿವೆ. ಕ್ರಿಕೆಟ್, ಸೈಕ್ಲಿಂಗ್ ಹೀಗೆ ಬಹು ಕ್ರೀಡೆಗಳಿಗೆ ತಾಣವಾಗಿದ್ದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದಿಂದಾಗಿ ಉಳಿದ ಕ್ರೀಡೆಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಏತನ್ಮಧ್ಯೆ ಅಥ್ಲೆಟಿಕ್‌ಗೂ ಪರಿಪೂರ್ಣವಾದ ವೇದಿಕೆ ಇಲ್ಲಿ ಲಭಿಸುತ್ತಿಲ್ಲ ಎಂದು ವಿವರಿಸಿದರು.
ಸೈಕ್ಲಿಂಗ್ ಕಾಶಿಯಾಗಿರುವ ವಿಜಯಪುರದಲ್ಲಿ ವೆಲೊಡ್ರೊಂ ಗಗನಕುಸುಮವಾಗಿದೆ. ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ವಯ ಜಾಗೆ ಸಹ ಗುರುತಿಸಲಾಗಿತ್ತು. ಆದರೆ ಈ ಜಾಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದು ಕ್ರೀಡಾ ಪ್ರತಿಭೆಗಳು ಕಮರುವಂತೆ ಮಾಡುತ್ತಿವೆ ಎಂದರು.
ಇದಕ್ಕೆ ಉತ್ತರಿಸಿದ ಕ್ರೀಡಾ ಸಚಿವ ನಾರಾಯಣಗೌಡ, ಸಿಂಥೆಟಿಕ್ ಕಾಮಗಾರಿಯನ್ನು ಕ್ರೀಡಾ ಇಲಾಖೆಯಿಂದ ಕೈಗೊಂಡಿರಲಿಲ್ಲ, ಕೆಬಿಜೆಎನ್‌ಎಲ್ ವತಿಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಆದರೂ ತಪ್ಪಿಸ್ಥರ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪುಣೆ, ಹೈದರಾಬಾದ್ ತಂತ್ರಜ್ಞರ ಸಲಹೆಯೊಂದಿಗೆ ವೈಜ್ಞಾನಿಕವಾಗಿ ವೆಲೊಡ್ರೊಂ ನಿರ್ಮಿಸಲಾಗುತ್ತಿದೆ, ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.