ಕಂದಾಯ ಇಲಾಖೆ ದಾಖಲೆಗಾಗಿ ಪರಿತಪಿಸುತ್ತಿದ್ದೀರಾ? ಕಾಳಜಿ ಬಿಡಿ ಇನ್ಮುಂದೆ ಮನೆಗೆ ಬರಲಿವೆ ದಾಖಲೆಗಳು….ವಿವರಗಳಿಗಾಗಿ ಈ ವರದಿ ನೋಡಿ….
ವಿಜಯಪುರ: ಕಂದಾಯ ಇಲಾಖೆಯಿಂದ ದಾಖಲೆ ಪಡೆಯೋದು ಎಂದರೆ ಅದೊಂದು ಹರಸಾಹಸದ ಕೆಲಸವೇ ಸರಿ…ಅಧಿಕಾರಿಗಳ ವಿಳಂಬ ನೀತಿಯಿಂದ ಅನೇಕ ಬಾರಿ ಚಪ್ಪಲಿ ಸವೆಸಬೇಕಾಗುತ್ತದೆ. ಇದನ್ನು ಮನಗಂಡ ಸರ್ಕಾರ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ ರೂಪಿಸಿದ್ದು ಮಾ. 12 ರಂದು ಜಿಲ್ಲಾದ್ಯಂತ ಚಾಲನೆ ಪಡೆದುಕೊಳ್ಳಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು ಜಿಲ್ಲೆಯಲ್ಲೂ ಚಾಲನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ದಾಖಲೆ ವಿತರಿಸಲು ಗ್ರಾಮ ಒನ್ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಅಲೆದಾಟ ತಪ್ಪಿಸಲು ಸರ್ಕಾರವು ಕಂದಾಯ ದಾಖಲೆ ರೈತನ ಮನೆಬಾಲಿಗೆ ತಲುಪಿಸುವ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರ ಮನೆಬಾಗಿಲಿಗೆ ಜಮೀನಿನ ಪಹಣಿ (ಆರ್‌ಟಿಸಿ) ಅಟ್ಲಾಸ್, ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸರ್ಕಾರದ ಸಾಧನೆವುಳ್ಳ ಕರಪತ್ರ ದಾಖಲೆಗಳನ್ನು ಪ್ಲಾಸ್ಟಿಕ್ ಲಕೋಟೆಯಲ್ಲಿ ಇರಿಸಿ, ಇಂಡೆಕ್ಸ್ ಸಮೇತ ಉಚಿತವಾಗಿ ತಲುಪಿಸಲಾಗುತ್ತದೆ ಎಂದರು.
ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಆಯಾ ತಹಸೀಲ್ದಾರ್‌ರ ಯೋಜನೆಯನ್ವಯ ಪ್ರತಿ ಗ್ರಾಮಕ್ಕೆ ಒಂದು-ಎರಡು ತಂಡಗಳನ್ನು ರಚಿಸಿದ್ದು, ಪ್ರತಿ ತಂಡದಲ್ಲಿ ಇಬ್ಬರು ಇರಲಿದ್ದಾರೆ. ಜಿಲ್ಲೆಯಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ತಲುಪಿಸಲು 2793 ಅಧಿಕಾರಿ ಸಿಬ್ಬಂದಿನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರಥಮ ಹಂತದಲ್ಲಿ ಸರ್ಕಾರದಿಂದ ಸ್ವೀಕೃತವಾದ ಅಂದಾಜು 2,31,344 ರೈತರ ಮನೆಬಾಗಿಲಿಗೆ ಅದೇ ದಿನದಂದು ಒದಗಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸದರಿ ದಾಖಲೆಗಳು ಗ್ರಾಮವಾರು, ಕುಟುಂಬವಾರು ವಿಂಗಡಿಸಿ ವಿತರಿಸಲು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಒಂದು ವೇಳೆ ದಾಖಲೆಗಳು ಮುದ್ರಣವಾಗದೇ ರೈತರಿಗೆ ದಾಖಲೆಗಳನ್ನು ಮುದ್ದಾಂ ತಲುಪಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ, ಅಂತಹ ರೈತರಿಗೆ ಒಂದು ವಾರ (ಮಾ. 21 ರಿಂದ 26 ರವರೆಗೆ) ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲಾಗುವುದು. 2015-16ನೇ ಸಾಲಿನ ಕೃಷಿ ಗಣತಿಯಂತೆ ಒಟ್ಟು 3,62,979 ರೈತರಿದ್ದು, ಅದರ ಪೈಕಿ ಪ್ರೊಬ್ ತಂತ್ರಾಂಶದಲ್ಲಿ ಒಟ್ಟು 3,39,529 ರೈತರು ಲಿಂಕ್ ಮಾಡಿದ್ದಾರೆ. ಇನ್ನೂ 23,450 ರೈತರು ಲಿಂಕ್ ಮಾಡುವುದು ಬಾಕಿ ಇರುತ್ತದೆ ಎಂದ ಅವರು, ಎರಡು ಲಕ್ಷಕ್ಕೂ ಹೆಚ್ಚು ರೈತರ ಮನೆಬಾಗಿಲಿಗೆ ಒಂದೇ ದಿನದಲ್ಲಿ ಕಂದಾಯ ದಾಖಲೆಗಳನ್ನು ತಲುಪಿಸುವ ಮಹತ್ವದ ಯೋಜನೆ ಸರ್ಕಾರ ಜಾರಿಗೊಳಿಸಿದೆ ಎಂದರು.
ಚಾಲನೆ ನೀಡುವ ಸ್ಥಳಗಳು:
ವಿಜಯಪುರ ತಾಲೂಕಿನ ನಾಗಠಾಣ, ತಿಕೋಟಾ ತಾಲೂಕಿನ ತೊರವಿ, ಬಬಲೇಶ್ವರ ತಾಲೂಕಿನ ಸಾರವಾಡ ಹಾಗೂ ನಿಡೋಣಿ, ಬ.ಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಹಾಗೂ ಕರಬಂಟನಾಳ, ಕೊಲ್ಹಾರ ತಾಲೂಕಿನ ಮುಳವಾಡ, ನಿಡಗುಂದಿ ತಾಲೂಕಿನ ವಂದಾಲ, ಮುದ್ದೇಬಿಹಾಳ ತಾಲೂಕಿನ ಕುಂಟೋಜಿ, ತಾಳಿಕೋಟಿ ತಾಲೂಕಿನ ಮಿಣಜಗಿ, ಇಂಡಿ ತಾಲೂಕಿನ ಲಚ್ಯಾಣ, ಚಡಚಣ ತಾಲೂಕಿನ ಇಂಚಗೇರಿ, ಸಿಂದಗಿ/ಆಲಮೇಲ ತಾಲೂಕಿನ ಕಕ್ಕಳಮೇಲಿ ಹಾಗೂ ದೇ.ಹಿಪ್ಪರಗಿ ತಾಲೂಕಿನ ದೇವೂರ ಹಾಗೂ ಮಣೂರ ಗ್ರಾಮಗಳಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದರು ಭಾಗವಹಿಸಲಿದ್ದು, ನಿಗಮ ಮಂಡಳಿ ಅಧ್ಯಕ್ಷರಿಗೆ , ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಿಗೂ ಆಹ್ವಾನಿಸಲಾಗಿದೆ. ಜಿಲ್ಲೆಯ ಉಳಿದ ಎಲ್ಲಾ ಗ್ರಾಮಗಳಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಸಿಬ್ಬಂದಿ ದಾಖಲೆಗಳನ್ನು ವಿತರಿಸಲು ನಿಯೋಜಿಸಲಾಗಿದೆ ಎಂದರು.