ಕಡಿಮೆ ಅವಧಿಯಲ್ಲಿ ಡಬ್ಬಲ್ ಹಣ ಬೇಕೆ? ಇಂಥದ್ದೇ ಮೆಸೇಜ್ ನಿಮಗೂ ಬಂದೀತು ಜೋಕೆ, ಲಕ್ಷ ಲಕ್ಷ ಹಣ ಕಳೆದುಕೊಂಡ ಅಮಾಯಕನ ಕಥೆ ಕೇಳಿ….ಇನ್ನಾದರೂ ಎಚ್ಚೆತ್ತುಕೊಳ್ಳಿ…!
ಸರಕಾರ ನ್ಯೂಸ್ ವಿಜಯಪುರ
ಡಿಜಿಟಿಲ್ ವಹಿವಾಟು ಹೆಚ್ಚಿದಂತೆಲ್ಲ ಮೋಸ, ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೋಸಕ್ಕೊಳಗಾಗುವವರೇನೂ ಕಡಿಮೆಯಾಗುತ್ತಿಲ್ಲ!
ಹೌದು, ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಹೆಚ್ಚಿನ ಹಣದ ದಾಹಕ್ಕೆ ಜನ ಬಲಿಯಾಗುತ್ತಿದ್ದು, ಇಲ್ಲೋರ್ವ ಡಬ್ಬಲ್ ಹಣದಾಸೆಗಾಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಎಲ್ಲಿ? ಹೇಗಾಯಿತು?
ಮೂಲತಃ ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದ ನಿವಾಸಿ ಲೋಹಿತಕುಮಾರ ಚನ್ನಪ್ಪ ದೊಡ್ಡಮನಿ ಮೋಸಕ್ಕೆ ಒಳಗಾಗಿದ್ದಾರೆ. ಸದ್ಯ ವಿಜಯಪುರದ ಕನಕದಾಸ ಬಡಾವಣೆಯಲ್ಲಿ ವಾಸವಾಗಿರುವ ಇವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಜನಾ ಸ್ಮಾಲ್ ಫೈನಾನ್ಸ್‌ಗಳಲ್ಲಿ ಖಾತೆ ಹೊಂದಿರುವ ಇವರ ಮೊಬೈಲ್ ಸಂಖ್ಯೆಗೆ ಒಂದು ದಿನ ಡಬ್ಬಲ್ ಹಣ ಬೇಕೆ ಹಾಗಾದರೆ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸಂದೇಶ ಬಂದಿದೆ.
ತನಿಷ್ಕಾ ಜೆವೆಲರ್ಸ್‌ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ, ಕಳುವಾದ ಚಿನ್ನದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಪಕ್ಕಾ !
ಇನ್‌ಸ್ಟಾಗ್ರಾಂ ನಲ್ಲಿ ಬಂದಿರುವ ವಾಡ್ ಈಜ್ ಸ್ಟಾಕ್‌ಸ್ರೇರ್ಡ್ ಎಂಬ ಅನಾಮಧೇಯ ಕಂಪನಿಯ ಸಂದೇಶ ನಂಬಿದ ಲೋಹಿತಕುಮಾರ ಆ ಸಂದೇಶದಂತೆ ಆಪ್ ಡೌನ್‌ಲೋಡ್ ಮಾಡಿಕೊಂಡು ಆರಂಭದಲ್ಲಿ 5 ಸಾವಿರ ರೂಪಾಯಿ ತೊಡಗಿಸಿದ್ದಾರೆ. ಬಳಿಕ ಮತ್ತೆ ಹಣ ಹಾಕುವಂತೆ ಪದೇ ಪದೇ ಒತ್ತಾಯಿಸಲಾಗಿ ಲೋಹಿತಕುಮಾರ ಹಂತ ಹಂತವಾಗಿ 4.86 ಲಕ್ಷ ರೂಪಾಯಿ ಹಾಕಿದ್ದಾರೆ. ಬಳಿಕ 10 ದಿವಸದಲ್ಲಿ ಶೇ.50 ಲಾಭ ಬರಲಿದೆ ಎಂದು ಮತ್ತೆ 39 ಸಾವಿರ ಹಣ ಹಾಕಿಸಿಕೊಂಡಿದ್ದಾರೆ.
ನಂತರ 30 ಲಕ್ಷ ರೂ.ಬೋನಸ್ ಬಂದಿದೆ ಅದರ ಶುಲ್ಕವಾಗಿ 6.50 ಲಕ್ಷ ರೂ.ನೀಡಬೇಕೆಂದಾಗ ಲೋಹಿತಕುಮಾರಗೆ ಅನುಮಾನ ಬಂದಿದೆ. ಕೂಡಲೇ ಸಹೋದರ ಸಂತೋಷಗೆ ಹಾಗೂ ಸ್ನೇಹಿತ ವಿಕಾಸ ರಾಠೋಡಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಆನ್‌ಲೈನ್ ಮೂಲಕ ಮೋಸವಾಗಿರುವುದರ ಅರಿವಾಗಿ ಸೈಬರ್ ಕ್ರೈಂ ಹೆಲ್ಪ್‌ಲೈನ್ ನಂ.1930 ಮೂಲಕ ದೂರು ದಾಖಲಿಸಿದ್ದಾರೆ. ಹೀಗೆ ಒಟ್ಟು 4.86 ಲಕ್ಷ ರೂಪಾಯಿ ಕಳೆದುಕೊಂಡಿರುವ ಲೋಹಿತಕುಮಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)