ಅಪಹರಿಸಿ ಹಣ ದೋಚಿದ ಮೂವರಿಗೆ ಜೀವಾವಧಿ ಶಿಕ್ಷೆ
ಸರಕಾರ್ ನ್ಯೂಸ್ ವಿಜಯಪುರ
ಮೋಟರ್ ಸೈಕಲ್ ಮೇಲೆ ಹೊರಟಿದ್ದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ ಬಳಿಯಲ್ಲಿದ್ದ ಹಣ ಹಾಗೂ ಎಟಿಎಂ ಕಾರ್ಡ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದ ಮೂವರು ಅಪರಾಧಿಗಳಿಗೆ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಶರಣಬಸು ಸಿದ್ದಪ್ಪ ದೇಗಿನಾಳ, ನಾನಾಗೌಡ ಶಿವಶರಣ ರಾಯಗುಂಡ, ಮುದಕಪ್ಪ ಊರ್ಫ್ ಚಂದ್ರಾಮ ಸಿದ್ದಲಿಂಗ ದೊಡ್ಡಮನಿ ಶಿಕ್ಷೆಗೆ ಗುರಿಯಾಗಿದ್ದಾರೆ. 2011 ಜು. 30ರಂದು ಮೋಟರ್ ಸೈಕಲ್ ಮೇಲೆ ಸಿಂದಗಿಯಿಂದ ಕಲಕೇರಿಗೆ ಹೊರಟಿದ್ದ ಮಲ್ಲಿಕಾರ್ಜುನ ದತ್ತಪ್ಪ ಕೆರಕಿ ಎಂಬುವರನ್ನು ಚಾಕು ತೋರಿಸಿ, ಕೈಕಾಲು ಕಟ್ಟಿ ಇಂಡಿಕಾ ಕಾರ್‌ನಲ್ಲಿ ಅಪರಹರಿಸಿಕೊಂಡು ಹೋಗಿದ್ದರು. ಮಲ್ಲಿಕಾರ್ಜುನ ಬಳಿಯಿದ್ದ 3500 ರೂಪಾಯಿ, ಯುನಿಯನ್ ಬ್ಯಾಂಕ್ ಎಟಿಎಂ ಕಾರ್ಡ್ ಮತ್ತು ಕೆನರಾ ಬ್ಯಾಂಕ್‌ನ ಒಂದು ಎಟಿಎಂ, ಮೊಬೈಲ್ ಹಾಗೂ ಮೋಟರ್ ಸೈಕಲ್ ಆರ್‌ಸಿ ಕಾರ್ಡ್ ತೆಗೆದುಕೊಂಡಿದ್ದರು. ಅಲ್ಲದೇ ಎಟಿಎಂನ ಗುಪ್ತ ಸಂಖ್ಯೆ ತಿಳಿದುಕೊಂಡು ಅದರಲ್ಲಿದ್ದ ಹಣ ತೆಗೆದುಕೊಂಡಿದ್ದರು. ಸುಮಾರು 10 ಗಂಟೆ ಕಾರ್‌ನಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಸತೀಶ ಎಲ್‌ಪಿ ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 79,500 ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸ್ದಿದ್ದರು.