ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನ ಸಚಿವ ಎಂ.ಬಿ. ಪಾಟೀಲರಿಂದ ಪರಿಶೀಲನೆ
ಅತೀವೃಷ್ಠಿ ಸಂದರ್ಭ ಪ್ರತಿಭಟನೆ ಸರಿಯೇ?
ವಿಜಯಪುರ: ಅತೀವೃಷ್ಠಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸಬೇಕಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗರ ನಡೆ ಎಷ್ಟರ ಮಟ್ಟಿಗೆ ಸರಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ ಪ್ರಶ್ನಿಸಿದರು. ಬುಧವಾರ ತಿಕೋಟಾ ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಮಳೆಯಿಂದಾದ ಹಾನಿ ಪರಿಶೀಲಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀವೃಷ್ಠಿಯಾಗಿದೆ. ಹಾನಿಯಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಬೇಕಿರುವುದು ಆಡಳಿತ ಮತ್ತು ಪ್ರತಿಪಕ್ಷಗಳ ಕರ್ತವ್ಯ ಎಂದರು. ವಿಜಯಪುರ ನಗರದಲ್ಲಿ ಸಾಕಷ್ಟು ಹಾನಿಯಾಗಿದೆ. ಬಡಾವಣೆಗಳಿಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನನಗಿಂತ ಮೊದಲು ಸ್ಥಳಕ್ಕೆ ಬರಬೇಕಿತ್ತು. ಹಾನಿ ಪರಿಶೀಲಿಸಿ ಪರಿಹಾರ ತಂದು ಕೊಡುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಜೆಪಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿಯಿಂದ ನಾನು ಹಾನಿ ಪರಿಶೀಲಿಸುತ್ತಿದ್ದೇನೆ ಎಂದರು. ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು? ಯಾವುದಾದರೂ ಫೈಲ್‌ಗೆ ಸಿದ್ದರಾಮಯ್ಯ ಅವರ ಸಹಿ ಇದೆಯಾ? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಏನೂ ಆಗಲ್ಲ. ನಾವು ಪ್ರಾಥಮಿಕ ತನಿಖೆ ಬಗ್ಗೆ ಚಾಲೇಂಜ್ ಮಾಡುತ್ತೇವೆ ಎಂದ ಎಂ.ಬಿ. ಪಾಟೀಲ, ಬಿಜೆಪಿಗರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಮೊದಲು ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆ ಕೇಳಲಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಪ್ರಾಥಮಿಕ ತನಿಖೆಯಾಗಿ ಅನುಮತಿ ಕೊಟ್ಟಿದ್ದಾರೆ. ಅವರು ರಾಜೀನಾಮೆ ಕೊಡಬೇಕೋ ಅಥವಾ ಸಿಎಂ ರಾಜಿನಾಮೆ ಕೊಡಬೇಕೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಸವಾಲೆಸೆದರು.
*