ದ್ರಾಕ್ಷಿ ಬ್ರ್ಯಾಂಡಿಂಗ್ ಗೆ ಮಾಸ್ಟರ್ ಪ್ಲ್ಯಾನ್, ನಮ್ಮ ವಿಜಯಪುರ ದ್ರಾಕ್ಷಿ ಮೇಳ ಆಯೋಜನೆ, ಸಿಇಒ ಶಿಂಧೆ ಬಿಚ್ಚಿಟ್ಟ ಗುಟ್ಟೇನು?
ಸರಕಾರ ನ್ಯೂಸ್ ವಿಜಯಪುರ
ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಖ್ಯಾತಿ ಪಡೆದ ವಿಜಯಪುರ ದ್ರಾಕ್ಷಿ ಬ್ರ್ಯಾಂಡಿಂಗ್, ಪ್ರಚಾರ ಹಾಗೂ ಮಾರಾಟ ಉದ್ದೇಶದಿಂದ “ನಮ್ಮ ವಿಜಯಪುರ ದ್ರಾಕ್ಷಿ” ಮೇಳ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯ ಬಸವ ವನದಲ್ಲಿ ಫೆ.16 ರಿಂದ 20 ರವರೆಗೆ ಈ ಮೇಳ ಆಯೋಜಿಸಲಾಗುತ್ತಿದ್ದು, ವಿವಿಧ ತೆರನಾದ ದ್ರಾಕ್ಷಿಗಳನ್ನು ಪ್ರದರ್ಶನದ ಜೊತೆಗೆ ಮಾರಾಟ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ವಿಜಯಪುರ ಜಿಲ್ಲೆ ತೋಟಗಾರಿಕೆ ಜಿಲ್ಲೆಯಾಗಿದೆ. ದ್ರಾಕ್ಷಿ, ದಾಳಿಂಬೆ, ಲಿಂಬೆ, ಈರುಳ್ಳಿ ಹೀಗೆ ಅನೇಕ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ದ್ರಾಕ್ಷಿ ಬೆಳೆಗೆ ರಾಜ್ಯದಲ್ಲಿಯೇ ಹೆಸರಾಗಿದೆ. ರಾಜ್ಯದಲ್ಲಿ ಒಟ್ಟು 32,473 ಹೆಕ್ಟೇರ್ ನಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದರೆ ಜಿಲ್ಲೆಯೊಂದರಲ್ಲೇ 20,911 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಒಟ್ಟು 13,377 ರೈತರು ಇದ್ದು ಇದರಲ್ಲಿ 4675 ಸಣ್ಣ ರೈತರು ಹಾಗೂ 8702 ದೊಡ್ಡ ರೈತರು ದ್ರಾಕ್ಷಿ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಒಟ್ಟು ಕ್ಷೇತ್ರದಿಂದ ಜಿಲ್ಲೆಯಲ್ಲಿ ಸುಮಾರು 5,22,775 ಮೆಟ್ರಿಕ್ ಟನ್ ಹಣ್ಣು ಉತ್ಪಾದನೆಯಾಗುತ್ತಿದೆ. ಇದರ ಶೇ. 90 ರಷ್ಟು ಹಣ್ಣು ಮೌಲ್ಯಾಭಿವೃದ್ಧಿಪಡಿಸಿ 1,17, 624 ಮೆಟ್ರಿಕ್ ಟನ್ ನಷ್ಟು ಒಣದ್ರಾಕ್ಷಿಯಾಗಿ ಉತ್ಪಾದನೆಯಾಗುತ್ತಿದೆ. ಉಳಿದ ಶೇ.10 ರಷ್ಟು ಅಂದರೆ ಸುಮಾರು 52000 ಮೆಟ್ರಿಕ್ ಟನ್ ನಷ್ಟು ತಾಜಾ ಹಣ್ಣುಗಳಾಗಿ ಮಾರಾಟ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 12 ವಿವಿಧ ತಳಿಗಳ ದ್ರಾಕ್ಷಿಗಳನ್ನು ಬೆಳೆಯಲಾಗುತ್ತಿದೆ. ಈ ಎಲ್ಲ ತಳಿಗಳನ್ನು ಪರಿಚಯಿಸುವುದು ಕೂಡ ಈ ಮೇಳ ದ ಉದ್ದೇಶವಾಗಿದೆ ಎಂದರು.
ಸುಮಾರು 10-12 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಹಣ್ಣುಗಳ ಅವಶ್ಯಕತೆ ಇರುವುದರಿಂದ ದ್ರಾಕ್ಷಿ ಹಣ್ಣುಗಳ ಜೊತೆಗೆ ಕಲ್ಲಂಗಡಿ, ಕರಬೂಜ, ಬಾರೆ, ಪಪ್ಪಾಯ, ಪೇರು, ಗೆಣಸು, ಗಜ್ಜರಿ ಮತ್ತಿತರ ಹಣ್ಣುಗಳನ್ನು ಮಹಿಳಾ ಸ್ವಸಹಾಯ ಸಂಘದ ಸಹಾಯದಿಂದ ಮಾರಾಟ ಮಾಡಲಾಗುವುದು. ಜೊತೆಗೆ ಸಿಹಿ ತಿಂಡಿ ತಿನಿಸು ಕೂಡ ಮಾರಾಟಕ್ಕೆ ಲಭ್ಯ ಎಂದರು.
ಜಿಪಂ ಅಧಿಕಾರಿ ಸಿ.ಬಿ. ದೇವರಮನಿ, ತೋಟಗಾರಿಕೆ ಅಧಿಕಾರಿ ಸಿದ್ದರಾಮಯ್ಯ ಬರಗಿಮಠ ಮತ್ತಿತರರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)