ವಿಜಯಪುರ

ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತ್ತಿಗೆ ಕಾರಣ ಏನು? ಅಸಲಿಗೆ ಆ ಭಯಾನಕ ಕೃತ್ಯ ನಡೆದಿದ್ದಾದರೂ ಎಂದು? ಯಲಿಗಾರ ಕೊರಳಿಗೆ ಬಿದ್ದ ಆ ಅನಾಧೇಯ ಕೊಲೆ ಕೃತ್ಯ ಕಥೆ ಏನು? ಇಲ್ಲಿದೆ ಇಂಟ್ರೆಸ್ಟಿಂಗ್‌ ಕಹಾನಿ…

ಸರಕಾರ ನ್ಯೂಸ್‌ ಚಡಚಣ

ಚಡಚಣ ಪೊಲೀಸ್‌ ಠಾಣೆಗೆ ಪದೇ ಪದೇ ವರ್ಗವಾಗಿ ಬಂದು ಸುದೀರ್ಘ ಸೇವೆ ಸಲ್ಲಿಸುತ್ತಿದ್ದ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತ್ತಿನ ಸುದ್ದಿ ಇದೀಗ  ಭೀಮಾತೀರದಲ್ಲಿ ಭಾರಿ  ಸಂಚಲನ ಮೂಡಿಸಿದೆ !

ಅಸಲಿಗೆ ಯಲಿಗಾರ ಅಮಾನತ್ತಾಗಿದ್ದಾದರೂ ಯಾಕೆ? ಯಾವ ಪ್ರಕರಣದಡಿ ಅಮಾನತ್ತುಗೊಂಡಿದ್ದಾರೆ? ಆದೇಶದಲ್ಲಿ ಏನಿದೆ? ಉಲ್ಲೇಖಿತ ಎಫ್‌ಐಆರ್‌ ಸಂಖ್ಯೆ-0071 ಯಾವ ಪ್ರಕರಣಕ್ಕೆ ಸಂಬಂಧಿಸಿದ್ದು? ಇದರಲ್ಲಿ ಯಲಿಗಾರ ಲೋಪವೇನು? ಹೀಗೆ ಸಾಲು ಸಾಲು ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದ್ದು ಆ ಕುರಿತ ಡಿಟೇಲ್ಸ್‌ ಇಲ್ಲಿದೆ.

ಪ್ರಕರಣದ ಹಿನ್ನೆಲೆ:

ಬೆಳಗಾವಿ ಉತ್ತರ ವಲಯದ ಆರಕ್ಷಕ ಮಹಾ ನಿರೀಕ್ಷಕ ವಿಕಾಸ್‌ ಕುಮಾರ್‌ ವಿಕಾಶ್‌ ಅವರು ಮಹಾದೇವ ಯಲಿಗಾರಗೆ ನೀಡಿದ ಅಮಾನತ್ತು ಆದೇಶದಲ್ಲಿ ಚಡಚಣ ಪೊಲೀಸ್‌ ಠಾಣೆ ಅಪರಾಧ ಸಂಖ್ಯೆ : 71/2023 ಕಲಂ 302, 201 ಐಪಿಸಿ ಪ್ರಕರಣದ ತನಿಖೆ ಕುರಿತು ಉಲ್ಲೇಖಿಸಿದ್ದಾರೆ.

ಈ ಪ್ರಕರಣ ಆ.1ರಂದು ನಡೆದಿದ್ದು, ಅನಾಮಧೇಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಜಿಗಜೇವಣಗಿ-ಮಹಾರಾಷ್ಟ್ರದ ಹಳ್ಳಿ ಬಾಲಗಾಂವ ರಸ್ತೆ ಬಳಿ ಅಂದು ಮಧ್ಯಾಹ್ನ 2ರ ಸಮಾರಿಗೆ ಸಚೀನ ಓಗೆಪ್ಪ ಅಳ್ಳಿಗಿಡ ಎಂಬುವ ದ್ರಾಕ್ಷಿ ಹೊಲದ ಹತ್ತಿರ ಮುಳ್ಳುಕಟ್ಟಿಯಲ್ಲಿ ಎರಡು ಬಟ್ಟೆಯಿಂದ ಕಟ್ಟಿರುವ ಗಂಟುಗಳು ಬಿದ್ದಿದ್ದವು. ಆ ಎರಡೂ ಗಂಟುಗಳು ನೂಲಿನ ಹಗ್ಗದಿಂದ ಕಟ್ಟಲ್ಪಟ್ಟಿದ್ದವು. ಮತ್ತು ಆ ಗಂಟುಗಳಿಂದ ರಕ್ತ ಸೋರಾಡುತ್ತಿತ್ತು. ಗಂಟುಗಳ ಮೇಲೆ ನೊಣಗಳು ಹಾರಾಡುತ್ತಿದ್ದವು. ಬಿಚ್ಚಿ ನೋಡಲಾಗಿ ಒಂದು ಗಂಟಿನಲ್ಲಿ ಕರಿ ಬಣ್ಣದ ಪ್ಲಾಸ್ಟಿಕ್‌ ಚೀಲ ಇದ್ದು ಅದರಲ್ಲಿ ಒಂದು ಗಂಡಸ್ಸಿನ ಮುಖ ಇರುವ ಹೆಣ ಇರುತ್ತದೆ, ಆ ಹೆಣ ತಲೆಯಿಂದ ಸೊಂಟದವರೆಗಿನ ಭಾಗ ಮಾತ್ರ ಇರುತ್ತದೆ. ಅದರ ಪಕ್ಕದಲ್ಲಿ ಇನ್ನೊಂದು ಗಂಟಿನಲ್ಲಿ ಗುಲಾಬಿ ಬಣ್ಣದ ಪ್ಲಾಸ್ಟಿಕ್‌ ಚೀಲ ಇದ್ದು ಗಂಡಸ್ಸಿನ ಸೊಂಟದಿಂದ ಮೊಳಕಾಲು ಭಾಗ ಮತ್ತು ಮೊಳಕಾಲಿನಿಂದ ಪಾದದವರೆಗೆ ಎರಡು ಕಾಲುಗಳು ಪ್ರತ್ಯೇಕವಾಗಿರುತ್ತವೆ. ಅಂದಾಜು 30-35 ವಸ್ಸಿನ ವ್ಯಕ್ತಿಯದ್ದಾಗಿದ್ದು ಸದೃಢ ಮೈಕಟ್ಟಿನದ್ದಾಗಿತ್ತು. ಬಹುಶಃ ಇದೊಂದು ಕೊಲೆ ಎಂದು ಅಂದಾಜಿಸಿ ಚಡಚಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಮುಂದೇನಾಯಿತು….?

ಜೇವರಗಿ -ಸಿಂದಗಿ ಬಸ್‌ನಲ್ಲಿ ಕಳ್ಳತನ, ಕಳುವಾದ ಚಿನ್ನಾಭರಣದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ

ಪ್ರಕರಣದ ತನಿಖೆ ಕೈಗೊಂಡಿದ್ದ ಮಹಾದೇವ ಯಲಿಗಾರ ಪ್ರಕರಣದ ಆರೋಪಿ ನಂ.1 ನೇದ್ದವನ ಹೇಳಿಕೆಯ ಒಂದೇ ಅಂಶ ಆಧಾರದ ಮೇಲೆ ಪ್ರಕರಣವನ್ನು ಉಮದಿ ಪೊಲೀಸ್‌ ಠಾಣೆಗೆ ವರ್ಗಾವಣೆಗೆ ನಿರ್ಧರಿಸಿದ್ದು, ಆದರೆ, ಮೇಲ್ನೋಟಕ್ಕೆ ಕೇವಲ ಆರೋಪಿ ನಂ.1ನೇದ್ದವನ ಹೇಳಿಕೆಯ ಆಧಾರದ ಮೇಲೆ ಕೃತ್ಯ ನಡೆದ ಸ್ಥಳದ ಬಗ್ಗೆ ನಿರ್ಧಾರಕ್ಕೆ ಬರುವುದು ಸಮಂಜಸವಾಗದೇ ಇದ್ದು, ಇನ್ನುಳಿದ ಆರೋಪಿತರನ್ನು ಸಹ ಕೂಡಲೇ ದಸ್ತಗಿರಿ ಮಾಡಿ ಕೃತ್ಯ ನಡೆದ ಸ್ಥಳದ ಖಚಿತ ಮಾಹಿತಿ ಪಡೆದುಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮಾಡದೇ ಇರುವುದು ಕಂಡು ಬಂದಿದೆ.

ಅಲ್ಲದೇ ಕೃತ್ಯ ನಡೆದ ಸ್ಥಳದಲ್ಲಿನ ರಕ್ತ ಹತ್ತಿದ ಮಣ್ಣು ಮತ್ತಿತರ ವಸ್ತುಗಳನ್ನು ಸ್ಥಳದ ಖಚಿತತೆಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಕೂಡಲೇ ಜಪ್ತಾದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸದೇ ಇರುವುದು ಸಹ ಕಂಡು ಬಂದಿದೆ.

ಮುಂದುವರಿದು ಪ್ರಕರಣದ ವರ್ಗಾವಣೆ ಕುರಿತು ಇಂಡಿ ನ್ಯಾಯಾಲಯಕ್ಕೆ ಕೋರಿಕೊಂಡ ನಂತರ ದಸ್ತಗಿರಿ ಆಗಿರುವ ಆರೋಪಿ ನಂ.1 ನೇದವನನ್ನು ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜತ್ತ ಇವರ ಕಡೆಗೆ ಹಾಜರುಪಡಿಸುವ ಕುರಿತು ಮತ್ತು ಪ್ರಕರಣದ ಕಾಗದ ಪತ್ರಗಳನ್ನು ಉಮದಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡುವಂತೆ ಇಂಡಿ ನ್ಯಾಯಾಲಯ ನೋಟಿಸ್‌ ಮುಖಾಂತರ ಸೂಚಿಸಿದ್ದರೂ ಯಲಿಗಾರ ಹಾಜರುಪಡಿಸದೇ ಆ ನೋಟಿಸ್‌ನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಯಾವುದೇ ಕ್ರಮ ವಹಿಸದಿರುವುದು ಕಂಡು ಬಂದಿದೆ.

ಇದಲ್ಲದೇ ಮೃತನ ವಾರಸುದಾರರ ಪತ್ತೆಗೆ ಸಂಬಂಧಿಸಿದಂತೆ ಆತನ ತಾಯಿಯ ಹಾಗೂ ಮೃತನ ಡಿಎನ್‌ಎ ಪರೀಕ್ಷೆ ಸಹ ಕೈಗೊಳ್ಳಬೇಕಾಗಿದ್ದು ಆ ಪ್ರಕ್ರಿಯೆ ಕೈಗೊಂಡಿರುವುದು ಸಹ ಕಂಡು ಬಂದಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಮಹಾದೇವ ಯಲಿಗಾರ ಅವರನ್ನು ಅಮಾನತ್ತುಗೊಳಿಸಲಾಗಿದೆ. ಮುಂದೇನು? ಎಂಬುದು ಕಾದುನೋಡಬೇಕಷ್ಟೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!