ಭೋವಿ ನಿಗಮದಲ್ಲಿ ಸಾಲ ಸೌಲಭ್ಯ ನೀಡುವುದಾಗಿ ವಂಚನೆ, ದಲ್ಲಾಳಿ ನಂಬಿ ಹಣ ಕೊಟ್ಟವರಿಗೆ ಪಂಗನಾಮ….ಅಯ್ಯಯ್ಯೋ ಏನಿದು ಅನ್ಯಾಯ?
ವಿಜಯಪುರ: ಭೋವಿ ಅಭಿವೃದ್ಧಿ ನಿಮಗಮದಲ್ಲಿ ಸಾಲ ಸೌಲಭ್ಯ ಒದಗಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ವಂಚನೆಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿಜಯಪುರದ ಮದಭಾವಿ ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು ಗ್ರಾಮಸ್ಥರು ಶುಕ್ರವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದಗೆ ಮನವಿ ಸಲ್ಲಿಸಿದ್ದಾರೆ.
ಕಾಂತು ಒಡೆಯರ, ಪರಶುರಾಮ ಹೊಸಪೇಟ, ಪುಂಡಲೀಕ ಮುರಾಳ, ಗುಜೂಲಕರ ಇತರರು ಸೇರಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ನಿಗಮದ ವತಿಯಿಂದ ಸಾಲದ ಹಣವು ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದ್ದು, ನಂತರ ದಲ್ಲಾಳಿಗಳು ಫಲಾನುಭವಿಗಳ ಕಡೆಯಿಂದ ಒಂದೊಂದು ಚೆಕ್ ಮತ್ತು ಪಾಸಬುಕ್ ಪಡೆದುಕೊಂಡು ಖಾತೆಯಲ್ಲಿದ್ದ 5 ಲಕ್ಷ, 8 ಲಕ್ಷ ಹೀಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ. ಅದಕ್ಕಾಗಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಮದಭಾವಿ ಗ್ರಾಮಸ್ಥರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದುಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.