ನಮ್ಮ ವಿಜಯಪುರ

ವಿಜಯಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವಾಂತರ, ರೋಗಿ ಮೈಮೇಲಿನ ಚಿನ್ನ ಕಳವು !

ಸರಕಾರ್‌ ನ್ಯೂಸ್‌ ವಿಜಯಪುರ

ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ರೋಗಿಯ ಮೈಮೇಲಿನ ಚಿನ್ನ ಕಳುವಾದ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿನ ಆರೋಗ್ಯ ಧಾಮ ಆಸ್ಪತ್ರೆಯಲ್ಲಿ ಅ. 27ರಂದೇ ಈ ಘಟನೆ ನಡೆದಿದ್ದು, ಚಿನ್ನಕ್ಕಾಗಿ ಆಸ್ಪತ್ರೆಗೆ ಅಲೆದಾಡಿ ಸುಸ್ತಾದ ಕುಟುಂಬಸ್ಥರು ಇದೀಗ ಅಂದರೆ ನ. 25ರಂದು ಆದರ್ಶ ನಗರ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯ ಚಾಲುಕ್ಯ ನಗರದ ನಿವಾಸಿ ವೀರೇಂದ್ರ ಶ್ರೀಕಾಂತ ಕೊರಚಗಾಂವ ಎಂಬುವರಿಗೆ ಈ ರೀತಿ ಅನ್ಯಾಯವಾಗಿದ್ದು, ಚಿನ್ನದ ಸರ ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ? 

ಅ. 27ರಂದು ವೀರೇಂದ್ರ ಅವರ ತಂದೆ ಶ್ರೀಕಾಂತ ಅವರಿಗೆ ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆರೋಗ್ಯಧಾಮ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಆಸ್ಪತ್ರೆಯ ಸಿಬ್ಬಂದಿ ವ್ವೀಲ್‌ ಚೇರ್‌ದಲ್ಲಿ ಶ್ರೀಕಾಂತ ಅವರನ್ನು ಕೂರಿಸಿಕೊಂಡು ಲಿಫ್ಟ್‌ ಮೂಲಕ 1ನೇ ಮಹಡಿಗೆ ಕರೆದುಕೊಂಡು ಹೋಗಿ ಐಸಿಯು ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿ ನಂತರ ಒಳರೋಗಿ ಎಂದು ದಾಖಲು ಮಾಡಿಕೊಂಡಿದ್ದಾರೆ. ಆಗ ಔಷಧ ತರಲೆಂದು ವೀರೇಂದ್ರ ಹೊರಗಡೆ ಹೋಗಿದ್ದಾರೆ. ಶ್ರೀಕಾಂತ ಅವರಿಗೆ ಐಸಿಯು ಘಟಕದಲ್ಲಿ ದಾಖಲು ಮಾಡಿದ್ದರಿಂದ ಕುಟುಂಬಸ್ಥರನ್ನೆಲ್ಲ ಹೊರಗಡೆ ಕುಳ್ಳಿರಿಸಿದ್ದಾರೆ. ಮಧ್ಯಾಹ್ನ ಶ್ರೀಕಾಂತ ಅವರ ಕೈಯಲ್ಲಿದ್ದ 10 ಗ್ರಾಂ ತೂಕದಚಿನ್ನದ  ಉಂಗುರವನ್ನು ಸಂಬಂಧಿಯಾದ ಪ್ರವೀಣ ಕೊರಚಗಾಂವ ಇವರ ಕಡೆಗೆ ಕೊಟ್ಟು ಸಹಿ ಪಡೆದುಕೊಂಡಿದ್ದಾರೆ. ಆಗ ಶ್ರೀಕಾಂತ ಅವರ ಕೊರಳಲ್ಲಿದ್ದ ಚಿನ್ನದ ಬಗ್ಗೆ ವಿಚಾರಿಸಲಾಗಿ ತಮ್ಮ ಆಸ್ಪತ್ರೆಯ ಸಿಬ್ಬಂದಿಯವರಿಗೆ ವಿಚಾರಿಸಿ ಹೇಳುವುದಾಗಿ ಆಸ್ಪತ್ರೆಯ ಹಿರಿಯ ಸಿಬ್ಬಂದಿ ತಿಳಿಸಿದರು. ನಂತರ ಪ್ರಜ್ಞಾಹೀನರಾಗಿದ್ದ ಶ್ರೀಕಾಂತರ ಅವರನ್ನು ಆರೋಗ್ಯ ಧಾಮ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನ. 3ರಂದು ಶ್ರೀಕಾಂತ ಅವರು ನಿಧನ ಹೊಂದಿದ್ದಾರೆ. ಆದರೆ, ಅ. 27ರಂದು ಮಧ್ಯಾಹ್ನ 1.30ರಿಂದ 3.30ರ ಸಮಯದಲ್ಲಿ ಮಾನಸ ರೆಸಿಡೆನ್ಸಿಯಲ್ಲಿರುವ ಆರೋಗ್ಯಧಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶ್ರೀಕಾಂತ ಕೊರಳಲ್ಲಿದ್ದ 1.20 ಲಕ್ಷ ರೂ.ಮೌಲ್ಯದ 30 ಗ್ರಾಂ ಚಿನ್ನದ ಸರ ಕಳ್ಳತನವಾಗಿದೆ ಎಂದು ವೀರೇಂದ್ರ ಅವರು ದೂರಿನಲ್ಲಿ ತಿಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!