ಶಾಸಕ ಯತ್ನಾಳಗೆ ಜಾರಿಯಾಯಿತೇ ನೋಟಿಸ್, ಈ ಬಗ್ಗೆ ಯತ್ನಾಳ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ಡಿಟೇಲ್ಸ್
ಸರಕಾರ್ ನ್ಯೂಸ್ ವಿಜಯಪುರ
ಕಳೆದ ಹಲವು ದಿನಗಳಿಂದ ತೀವ್ರ ತಾರಕಕ್ಕೇರಿರುವ ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಡುವಿನ ವಾಕ್ಸಮರ ಇದೀಗ ಮತ್ತಷ್ಟು ಬಿಗಡಾಯಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಶಾಸಕ ಯತ್ನಾಳಗೆ ನೋಟಿಸ್ ನೀಡಿರುವ ಚರ್ಚೆ ಜೋರಾಗಿದೆ.
ಆದರೆ, ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನನಗೆ ಯಾವುದೇ ನೋಟೀಸ್ ಬಂದಿಲ್ಲ. ಸುಮ್ಮನೆ ಊಹಾಪೋಹ ಹರಡಿಸಿದ್ದಾರೆ ಎಂದಿದ್ದಾರೆ.
ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು, ವಂಶಪಾರಂಪರೆ ರಾಜಕೀಯ ಮುಂದುವರೆಸುವ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ್ ಇಷ್ಟೆಲ್ಲ ಮಾತನಾಡಿದ್ದಾನೆ ನೋಟಿಸ್ ಯಾಕೆ ನೀಡಿಲ್ಲ ಅಂತಾ ಕೆಲವರಿಗೆ ಕಾಡುತ್ತಿದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೆ ಎಂದರು.
ಅಲ್ಲದೇ, ಯಾವ ಭಯಕ್ಕೂ ಅಂಜುವ ಮಗ ನಾನಲ್ಲ. ನಿನ್ನೆ ವರಿಷ್ಠರೇ ಮಾತನಾಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿಯಲ್ಲೆ ಬಹುದೊಡ್ಡ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಮಾಡುವ ಸಾಧ್ಯತೆ ಇವೆ. ನನ್ನ ಪರವಾಗಿಯು ಒಳ್ಳೆಯ ನಿರ್ಣಯ ಆಗಲಿದೆ ಎಂದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)