ನಕಲಿ ಜಾತಿ ಪ್ರಮಾಣ ಪತ್ರ ಬಳಕೆ, ಫಲಾನುಭವಿ-ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲು !
ಸರಕಾರ್ ನ್ಯೂಸ್ ವಿಜಯಪುರ
ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸರ್ಕಾರಿ ಸೌಲಭ್ಯ ಬಳಸಿಕೊಂಡಿರುವ ವ್ಯಕ್ತಿಯ ಮೇಲೆ ಹಾಗೂ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಆನಂದ ಪೈಲಪ್ಪ ಭೋವಿ ಈತನ ಮೇಲೆ ಪ್ರಕರಣ ದಾಖಲಾಗಿದೆ. ಈತನಿಗೆ ಪ್ರಮಾಣ ಪತ್ರ ನೀಡಿದ ಗ್ರೇಡ್ -2 ತಹಸೀಲ್ದಾರ್, ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮೇಲೆ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಆನಂದ ಪೈಲಪ್ಪ ಭೋವಿ ಮೂಲತಃ ಪ್ರವರ್ಗ-1ರಲ್ಲಿ ಬರುವ ಹಿಂದೂ ಬೋಯಿ ಜಾತಿಗೆ ಸೇರಿದವರಾಗಿದ್ದಾರೆ. ಇವರು ತಮ್ಮ ಮೂಲ ಜಾತಿ “ಬೋಯಿ” ಬದಲು “ಭೋವಿ” ಎಂದು ಸುಳ್ಳು ಜಾತಿ ನಮೂದಿಸಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸರ್ಕಾರದ ಸಹಾಯ ಧನ, ಸಾಲದ ಸವಲತ್ತು ಪಡೆದುಕೊಂಡು ನಿಜವಾದ ಪರಿಶಿಷ್ಟ ಜಾತಿ ಜನರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಬಗ್ಗೆ ಜಾತಿ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು ದಾಖಲಾಗಿತ್ತು.
ವಿಚಾರಣೆ ವೇಳೆ ಕಂಡು ಬಂದಿದ್ದೇನು?
ಆನಂದ ಪೈಲಪ್ಪ ಭೋವಿ ಇವರ ಮಕ್ಕಳ ಹಾಗೂ ಸಂಬಂಧಿಕರ ಶಾಲಾ ದಾಖಲಾತಿ ಪರಿಶೀಲಿಸಲಾಗಿ ಇವರ ಮನೆತನದ ಹಿರಿಯರು ಮೀನುಗಾರಿಕೆ ಮಾಡಿಕೊಂಡು ಬಂದಿರುವುದು ಮತ್ತು ಮೀನುಗಾರಿಕೆಯೇ ಇವರ ಕುಲಕಸುಬಾಗಿರುವುದು ಕಂಡು ಬಂದಿದೆ. ಅಲ್ಲದೇ, ಇವರ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಬೆಸ್ತರು (ಮೀನುಗಾರ) ಜಾತಿಯಂತೆ ಕಂಡು ಬಂದಿದ್ದರಿಂದ ಈತ ಪ್ರವರ್ಗ-1ರಲ್ಲಿ ಬರುವ ಬೋಯಿ ಜಾತಿಗೆ ಸೇರಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಹೀಗಾಗಿ ಈತನ ಸುಳ್ಳು ಜಾತಿ ಪ್ರಮಾಣ ಪತ್ರ ಬಳಸಿ ಭೋವಿ ಅಭಿವೃದ್ಧಿ ನಿಗಮದಿಂದ ವಾಹನ ಖರೀದಿ ಸಾಲಸೌಲಭ್ಯ ಪಡೆದುಕೊಂಡು ಅಪರಾಧವೆಸಗಿದ್ದು, ಈತನ ಮೇಲೆ ಹಾಗೂ ಈತನಿಗೆ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)