ಪ್ಯಾಲೆಸ್ತೇನ್ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ, ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಮೇಲೆ ದಾಖಲಾಯಿತು ಎಫ್‌ಐಆರ್ !
ಸರಕಾರ ನ್ಯೂಸ್ ವಿಜಯಪುರ
ಭಾರತ ಸರ್ಕಾರದ ನಿಲುವಿಗೆ ವಿರುದ್ಧವಾಗಿರುವ ಕಾರಣಕ್ಕೆ ಅನುಮತಿ ನಿರಾಕರಿಸಿದರೂ ಪ್ಯಾಲೆಸ್ತೇನ್ ರಕ್ಷಣೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಜಿಲ್ಲಾಧ್ಯಕ್ಷ ಅತಾವುಲ್ಲಾ ಅಲ್ತಾಫ್ಹುಸೇನ್ ದ್ರಾಕ್ಷಿ ಮೇಲೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ಯಾಲೆಸ್ತೇನ್ ರಕ್ಷಣೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲು ಎಸ್‌ಡಿಪಿಐ ತಹಸೀಲ್ದಾರ್‌ರಿಂದ ಅನುಮತಿ ಕೇಳಿತ್ತು. ಆದರೆ, ಈ ವಿಷಯ ಭಾರತ ಸರ್ಕಾರದ ನಿಲುವಿಗೆ ವಿರುದ್ಧವಾಗಿದ್ದರಿಂದ ತಹಸೀಲ್ದಾರ್ ಅನುಮತಿ ನಿರಾಕರಿಸಿದ್ದರು. ಆದರೂ, ನ. 3ರಂದು ಜಾಮಿಯಾ ಮಸೀದಿ ಎದುರು ಕೆಲವು ಜನರೊಡಗೂಡಿ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭ ಪೆಟ್ರೋಲಿಂಗ್‌ನಲ್ಲಿದ್ದ ಗೋಳಗುಮ್ಮಟ ಪೊಲೀಸರು ಗಮನಿಸಲಾಗಿ ನಿಯಮ ಉಲ್ಲಂಘಸಿ ಪ್ರತಿಭಟನೆ ನಡೆಸಿದ್ದು ಕಂಡು ಬಂದಿದೆ.
ಇಸ್ರೇಲ್ ದೇಶದ ವಿರುದ್ಧ ಭಾಷಣದಲ್ಲಿ ಮುಸ್ಲಿಂ ಕೋಮನ್ನು ಎತ್ತಿ ಕಟ್ಟಿ ಈ ವಿಷಯ ಭಾರತದ ನಿಲುವಿಗೆ ವಿರುದ್ಧವಾಗಿದ್ದು, ಈ ವಿಷಯ ಕುರಿತು ಮಾತನಾಡಿದರೆ ಮುಂಬರುವ ದಿನಗಳಲ್ಲಿ ಕೋಮು ಸಂಘರ್ಷ ಜರುಗುತ್ತವೆ ಎಂದು ತಿಳಿದೂ, ಗಲಾಟೆಗೆ ತಯಾರಾಗುವಂಥ ಕರೆ ನೀಡಿದ ಭಾಷಣ ಮಾಡಿದ್ದಲ್ಲದೇ ವರ್ಗಗಳ ನಡುವೆ ವೈಮನಸ್ಸು ಬೆಳೆಸುವ ರೀತಿ ಹೇಳಿಕೆ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)