ವಿಜಯಪುರ

ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ, ಪ್ರತಿಜ್ಞಾ ವಿಧಿ ಬೋಧಿಸಿದ ಸಿಇಒ ರಾಹುಲ್ ಶಿಂಧೆ ಹೇಳಿದ್ದೇನು?

ಸರಕಾರ ನ್ಯೂಸ್ ವಿಜಯಪುರ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಮತದಾನ ಮಹತ್ವ ಕುರಿತು ಅರಿವು-ಜಾಗೃತಿ ಮೂಡಿಸಿದರು.

ಇಂಡಿ ತಾಲೂಕಿನ ಕೋಳುರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾವಲಸಂಗ ಗ್ರಾಮದ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೆ ಹಾಗೂ ಚಡಚಣ ತಾಲೂಕಿನ ಧೂಳಖೇಡ ಗ್ರಾಮ ಪಂಚಾಯತಿಯ ಶಿರಾನಾಳ ಗ್ರಾಮದ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ಕಾಮಗಾರಿ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಮತದಾನ ಮಹತ್ವ ಕುರಿತು ಅರಿವು-ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಆಮಿಷಕ್ಕೆ ಒಳಗಾಗಬೇಡಿ, ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡುವುದು ಅತ್ಯವಶ್ಯಕವಾಗಿದೆ. ಮತದಾರ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಬೇಕು. ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಾವು ಅದೃಷ್ಟವಂತರು. ಈ ಅವಕಾಶವನ್ನು ಪಡೆದ ಪ್ರತಿಯೊಬ್ಬ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಯೋಗ್ಯ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಸ್ವಸ್ಥ, ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಕಡ್ಡಾಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಇದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿದಾಗ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿದಂತಾಗುತ್ತದೆ. ಅನೇಕ ಮಹನೀಯರ ಹೋರಾಟದ ಫಲವಾಗಿ ಇಂದು ನಾವು ಮತದಾನದ ಹಕ್ಕನ್ನು ಪಡೆದಿದ್ದು, ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನರಿತು ಮತದಾನ ಮಾಡಬೇಕು ಎಂದು ಹೇಳಿದರು.


ಈ ಸಂದರ್ಭಧಲ್ಲಿ ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ ಮದ್ದಿನ, ಸಹಾಯಕ ನಿರ್ದೇಶಕರು(ಗ್ರಾ.ಉ) ಸಂಜೀವ ಖಡಗೇಕರ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಮಹಾತ್ಮಗಾಂಧಿ ನರೇಗಾ ಕೂಲಿ ಕಾರ್ಮಿಕರು “ಮತದಾರರ ಪ್ರತಿಜ್ಞಾ ವಿಧಿ”ಯನ್ನು ಭೋಧಿಸಿದರು. ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಒಂದು ವರ್ಷದಲ್ಲಿ ನೂರು ದಿನ ಕೆಲಸ ಪೂರೈಸಿದ ಕುಟುಂಬದ ಕಾರ್ಮಿಕರಿಗೆ ಟೊಪ್ಪಿಗೆ ಮತ್ತು ಜಾಕೀಟ್ ಗಳನ್ನು ವಿತರಿಸಲಾಗುವುದು, ಎಲ್ಲ ಕೂಲಿ ಕಾರ್ಮಿಕರು ನಿರಂತರವಾಗಿ ಕೆಲಸ ನಿರ್ವಹಿಸಿ 100 ದಿನಗಳ ಕೆಲಸ ಪೂರೈಸಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳಾದ ವೈಯಕ್ತಿಕ ಕಾಮಗಾರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಮೂಲಕ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.
ನಂತರ ಇಂಡಿ ತಾಲೂಕಿನ ಕಪನಿಂಬರಗಿ ಗ್ರಾಮ ಪಂಚಾಯಿತಿಗೆ ಭೇಟಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳುಅಂಗನವಾಡಿಯಲ್ಲಿ ಮಕ್ಕಳಿಗೆ ಪ್ರತಿದಿನ ಒದಗಿಸಲಾಗುತ್ತಿರುವ ಪೌಷ್ಠಿಕ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದುಕೊಂಡು, ಮಕ್ಕಳಿಗೆ ಪ್ರತಿದಿನ ಉತ್ತಮ ಪೌಷ್ಠಿಕ ಆಹಾರ ಒದಗಿಸುವಂತೆ ಸೂಚನೆ ನೀಡಿದರು.
ನಂತರ ಗುಂದ್ವಾನ ಗ್ರಾಮದ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನ ಕೇಂದ್ರವನ್ನು ವಿವಿಧ ಕಲಾಕೃತಿಗಳಿಂದ ಚಿತ್ರೀಕರಿಸಿ ಸೌಂದರ್ಯೀಕರಣಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಇಂಡಿ ತಾಲೂಕಿನ ಝಳಕಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮ ಪಂಚಾಯತಿ ನೂತನ ಕಟ್ಟಡವನ್ನು ಪರಿಶೀಲಿಸಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ ಅವರು, ಬಿ.ಎಲ್.ಓ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಗಳಲ್ಲಿನ ಮತದಾರರು ವಲಸೆ ಹೋಗಿದ್ದರೆ, ಅಂಥವರಿಗೆ ಪತ್ರ ಚಳುವಳಿ ನಡೆಸುವ ಮುಖೇನ ಮತದಾನ ಮಾಡಲು ಪ್ರೇರೆಪಿಸಬೇಕು ಮತ್ತು ಅವರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿ ಮತದಾನ ಮಹತ್ವದ ಸಂದೇಶ ರವಾನಿಸಿ, ಅವರೊಂದಿಗೆ ಗುಂಪು ಸಂವಾದ ನಡೆಸುವಂತೆ ಸೂಚನೆ ನೀಡಿದರು.
ಚಡಚಣ ತಾಲೂಕು ಪಂಚಾಯತಿಯ ಅನುದಾನದಲ್ಲಿ ಹಲಸಂಗಿ ಗ್ರಾಮ ಪಂಚಾಯತಿಯ ಏಳಗಿ ಪಿ.ಹೆಚ್. ಗ್ರಾಮದಲ್ಲಿ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯವನ್ನು ವೀಕ್ಷಿಸಿದ ಅವರು, ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲು ಕ್ರಮನ ಕೈಗೊಳ್ಳಬೇಕು. ತದನಂತರ ಕರ್ನಾಟಕದ ಗಡಿ ಪ್ರದೇಶದ ಚುನಾವಣಾ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಪುಸ್ತಕವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ. ಬಿ. ದೇವರಮನಿ, ಚಡಚಣ ತಾಲೂಕಿನ ಸಹಾಯಕ ನಿರ್ದೇಶಕ(ಗ್ರಾ.ಉ)ರು.ಮಹಾಂತೇಶ ಹೋಗೋಡಿ, ಕೊಳುರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರೇಶ ಹಿಟ್ಟಿನಹಳ್ಳಿ , ಕಪನಿಂಬರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ ತಳವಾರ, ಧೂಳಖೇಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ. ಶಶಿಕಲಾ ಕೆಂಗಲಗುತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!