ಬಂಗಾರದಂಗಡಿ ಮಾಲೀಕನಿಗೆ ಮಕಮಲ್ ಟೋಪಿ, ಮರಾಠಿಯಲ್ಲಿ ಮಾತಾಡಿ ಮರಳು ಮಾಡಿದಾಕೆ ಕದ್ದ ಚಿನ್ನವೆಷ್ಟು ಗೊತ್ತೆ?
ಸರಕಾರ ನ್ಯೂಸ್ ಇಂಡಿ
ಬಂಗಾರದ ಅಂಗಡಿ ಮಾಲೀಕ ಮತ್ತು ಅಲ್ಲಿನ ಸಿಬ್ಬಂದಿಯ ಗಮನ ಬೇರೆ ಕಡೆ ಸೆಳೆದು ಚಿನ್ನದ ತಾಳಿ ಸರ ಕಳುವು ಮಾಡಿಕೊಂಡು ಹೋದ ಪ್ರಕರಣ ಇಂಡಿ ನಗರದ ಸರಾಫ್ ಬಜಾರದಲ್ಲಿ ನಡೆದಿದೆ.
ಸಂದೀಪ ಧನಶೆಟ್ಟಿ ಅವರಿಗೆ ಸೇರಿದ ಜೀನಚಂದ್ರ ರಾವಜಿ ಧನಶೆಟ್ಟಿ ಜುವೆಲರ್ಸ್ ಶಾಪ್‌ನಲ್ಲಿ ಆ. 18ರಂದು ಬೆಳಗ್ಗೆ 11.23ಕ್ಕೆ ಈ ಘಟನೆ ನಡೆದಿದೆ.
ಬಂಗಾರದ ತಾಳಿ ಖರೀದಿಗೆ ಎಂದು ಬಂದ ಮೂವರು ಹೆಣ್ಣು ಮಕ್ಕಳು ಆರಂಭದಲ್ಲಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಬಳಿಕ ಮರಾಠಿಯಲ್ಲಿ ಮಾತು ಆರಂಭಿಸಿದ್ದರಿಂದ ಮರಾಠಿ ತಿಳಿಯದ ಮಾಲೀಕ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಪವಾರ ಇವರನ್ನು ಸಹಾಯಕ್ಕೆ ಕರೆದಿದ್ದಾರೆ. ಅವರ ಜೊತೆಗೆ ಮರಾಠಿಯಲ್ಲಿ ಮಾತನಾಡಿದ ಆ ಮಹಿಳೆಯರು ವಿವಿಧ ನಮೂನೆಯ ತಾಳಿ ಸರ ತೋರಿಸಲು ಹೇಳಿದ್ದಾರೆ. ಆಗ ಒಂದು ತಾಳಿ ಸರ ತೆಗೆದುಕೊಂಡು ಮತ್ತೊಂದು ಟ್ರೇ ತರುವಂತೆ ಹೇಳಿ ಗಮನ ಬೇರೆ ಕಡೆ ಸೆಳೆದಿದ್ದಾರೆ. ಬಳಿಕ ಮತ್ತೊಂದು ತಾಳಿ ಸರ ಕೂಡ ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ತಮಗೆ ಒಂದು ಪಸಂದ್ ಬಂದಿದೆ ಎಂದಿದ್ದು, ಮನೆಯಲ್ಲಿ ತಮ್ಮ ಗಂಡನನ್ನು ಕರೆದುಕೊಂಡು ಬರುವುದಾಗಿ ತಿಳಿಸಿ ಹೋಗಿದ್ದಾರೆ.
ಇದನ್ನೆಲ್ಲ ಅಂಗಡಿಯಲ್ಲಿದ್ದ ಶ್ರೀದೇವಿನ ಆನಂದ ಬಿರಾದಾರ ಹಾಗೂ ಅಶ್ವಿನಿ ಧನಸಿಂಗ್ ಪವಾರ ನೋಡಿದ್ದಾರೆ. ಆದರೆ, 38.8 ಮಿಲಿ ಗ್ರಾಂನ ಅಂದಾಜು 2.26 ಲಕ್ಷ ರೂ.ಮೌಲ್ಯದ ತಾಳಿ ಸರ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಅಂಗಡಿ ಮಾಲೀಕ ಇಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)