ಬ್ಲ್ಯಾಕ್ ಮನಿ ವೈಟ್ ಮಾಡುವುದಾಗಿ ವಂಚನೆ, ಕಿರಾತಕರಿಗೆ ಖೆಡ್ಡಾ ತೋಡಿದ ಖಾಕಿ ಪಡೆ, ಹೇಗಿತ್ತು ಗೊತ್ತಾ ?
ಸರಕಾರ ನ್ಯೂಸ್ ವಿಜಯಪುರ
ಬ್ಲ್ಯಾಕ್ ಮನಿ ವೈಟ್ ಮಾಡುವುದಾಗಿ ವಂಚಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಕಿರಾತಕರಿನ್ನು ಖಾಕಿ ಪಡೆ ಖೆಡ್ಡಾಕ್ಕೆ ಕೆಡವಿದೆ.
ಬೆಳಗಾವಿ ಜಿಲ್ಲೆಯ ಸಂಗಣಕೇರಿ ಗ್ರಾಮದ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಕೊಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಬಸ್ತಿ ಗಲ್ಲಿಯ ಅಪ್ಪಾಸಾಹೇಬ ಬಾಬು ಇಂಚಲ್ ಹಾಗೂ ಚಿಕ್ಕೋಡಿಯ ಮಾತಂಗಿ ಕೇರಿಯ ನಿವಾಸಿ ಸುನೀಲ ಕಾಶಿನಾಥ ದೊಡ್ಡಮನಿ ಬಂಧಿತ ಆರೋಪಿಗಳು.
ಈ ಆರೋಪಿತರು ಬಬಲೇಶ್ವರ ಪಟ್ಟಣದ ನಿವಾಸಿ ಚಂದ್ರಶೇಖರ ಬಸಪ್ಪ ಕನ್ನೂರ ಎಂಬುವರಿಗೆ ಮೋಸ ಮಾಡಿದ್ದರು. ತಮ್ಮ ಬಳಿ ಬ್ಲ್ಯಾಕ್ ಮನಿ ಇದ್ದು ಅದನ್ನು ವೈಟ್ ಮಾಡಿಕೊಟ್ಟರೆ ಅದರ ಮೂರ್ನಾಲ್ಕು ಪಟ್ಟು ಹಣ ಕೊಡುವುದಾಗಿ ಹೇಳಿ 20 ಲಕ್ಷ ರೂ. ವಂಚಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣ ಕೊಟ್ಟು ನಂಬಿಕೆ ಬರುವಂತೆ ಮಾಡಿರುವ ಆರೋಪಿತರು ಬಳಿಕ ಒಂದು ಕೋಟಿ ರೂ. ಎಂದು ರಟ್ಟಿನ ಬಾಕ್ಸ್ ನಲ್ಲಿ ಹಣದ ಕೆಳಗೆ ಖಾಲಿ ಪೇಪರ್ ಇಟ್ಟು ದೂರುದಾರನಿಂದ 20 ಲಕ್ಷ ರೂಪಾಯಿ ಪಡೆದು ಹೋಗಿದ್ದಾರೆ. ಮೋಸದ ಅರಿವಾದ ರೈತ ಚಂದ್ರಶೇಖರ ಕನ್ನೂರ ದೂರು ದಾಖಲಿಸಿದ್ದರು.
ದೂರು ಆಧರಿಸಿ ಎಸ್ ಪಿ ಎಚ್.ಡಿ. ಆನಂದಕುಮಾರ ಎಎಸ್ ಪಿ ಶಂಕರ ಮಾರಿಹಾಳ ಮಾರ್ಗದರ್ಶನ ಹಾಗೂ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ 19 ಲಕ್ಷ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಮತ್ತಿತರ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ. ತಂಡದ ಕಾರ್ಯವನ್ನು ಎಸ್ ಪಿ ಎಚ್. ಡಿ. ಆನಂದಕುಮಾರ ಶ್ಲಾಘಿಸಿದ್ದಾರೆ.