ರೈಲ್ವೆ ಕ್ಷೇತ್ರ ಅಭಿವೃದ್ಧಿಗೆ ಸಂಸದರ ಕೊಡುಗೆ ಏನು? ಕಳೆದ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು ಗೊತ್ತಾ? ಇಲ್ಲಿದೆ ಡಿಟೇಲ್ಸ್…
ಸರಕಾರ ನ್ಯೂಸ್ ವಿಜಯಪುರ
ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಸಂಸದ ಜಿಗಜಿಣಗಿ ಅವರ ಕೊಡುಗೆ ಏನು? ಕಳೆದ ಒಂಬತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಏನು? ತಂದ ಅನುದಾಣವೆಷ್ಟು? ಕೈಗೊಂಡ ಅಭಿವೃದ್ಧಿ ಕಾರ್ಯಗಳೇನು? ಎಂಬ ಕುತೂಹಲ ಸಹಜ.
ಇದಕ್ಕೆ ಉತ್ತರವಾಗಿ ಸಂಸದ ರಮೇಶ ಜಿಗಜಿಣಗಿ ಕಳೆದ ಒಂಬತ್ತು ವರ್ಷಗಳ ತಮ್ಮ ಸಾಧನೆ ವಿವರ ಬಿಚ್ಚಿಟ್ಟಿದ್ದು, ಕೇವಲ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಬರೋಬ್ಬರಿ 1311 ಕೋಟಿ ರೂ.ಅನುದಾನ ತಂದಿದ್ದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸೋಲಾಪುರ ಮತ್ತು ವಂದಾಲ್ ನಿಲ್ದಾಣಗಳ ನಡುವಿನ ವಿದ್ಯುದ್ದೀಕರಣದೊಂದಿಗೆ ಡಬ್ಲಿಂಗ್ ಪೂರ್ಣಗೊಳಿಸಲಾಗಿದೆ. ವಂದಾಲ್ ಮತ್ತು ಗದಗ ನಿಲ್ದಾಣಗಳ ನಡುವಿನ ಕಾಮಗಾರಿ ಭರದಿಂದ ಸಾಗಿದ್ದು, ಮಾರ್ಚ್ 2024ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ಪೂರ್ಣಗೊಂಡ ಬಳಿಕ ವಿಜಯಪುರ ಮತ್ತು ಬೆಂಗಳೂರು ಹಾಗೂ ಇತರ ಎಲ್ಲ ರೈಲುಗಳನ್ನು ಇಲೆಕ್ಟ್ರಿಕಲ್ ರೈಲುಗಳಾಗಿ ಓಡಿಸಲು ರೈಲ್ವೆಗೆ ಸಾಧ್ಯವಾಗುತ್ತದೆ. ಆ ಮೂಲಕ ಶುದ್ಧ ಇಂಧನದೊಂದಿಗೆ ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ. ಮಾಲಿನ್ಯ ಕಡಿಮೆಯಾಗಲಿದೆ. ಈಗಾಗಲೇ ವಿಜಯಪುರ-ಹೈದ್ರಾಬಾದ್ ಮತ್ತು ವಿಜಯಪುರ-ರಾಯಚೂರ ನಡುವೆ ರೈಲು ಸಂಚರಿಸುತ್ತಿವೆ. ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸುವ ಗೂಡ್ಸ್ ರೈಲುಗಳು ವಿದ್ಯುತ್ ಲೋಕೋದಿಂದ ಚಲಿಸುತ್ತಿವೆ ಎಂದರು.
20 ಕೋಟಿ ವೆಚ್ಚದಲ್ಲಿ ಗೂಡ್ಸ್ ಶೆಡ್:
ಅಲಿಯಾಬಾದ್‌ನಲ್ಲಿ ಅಂದಾಜು 20 ಕೋಟಿ ರೂ.ವೆಚ್ಚದಲ್ಲಿ ಗೂಡ್ಸ್ ಶೆಡ್ ಪೂರ್ಣಗೊಳಿಸಲಾಗಿದೆ. ಅಮೃತ ನಿಲ್ದಾಣಗಳ ವಿಭಾಗದಲ್ಲಿ ವಿಜಯಪುರ ಸೇರ್ಪಡೆಯಾಗಿದ್ದು, 28 ಕೋಟಿ ರೂ.ವೆಚ್ಚದಲ್ಲಿ ನಿಲ್ದಾಣದ ಯಾರ್ಡ್ ಆಧುನೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ 2023ರೊಳಗೆ ಮೊದಲ ಹಂತ ಪೂರ್ಣಗೊಳ್ಳಲಿದೆ. ವಿಜಯಪುರದಲ್ಲಿಯೇ ರೈಲುಗಳ ನಿರ್ವಹಣೆಗಾಗಿ ನಿಲ್ದಾಣವು 4 ಪ್ಲಾರ್ಟ್ ಫಾರ್ಮ್‌ಗಳನ್ನು ಮತ್ತು ಫೀಟ್‌ಲೈನ್‌ನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ವಿಜಯಪುರದಿಂದ ತಿರುಪತಿ, ವಿಜಯವಾಡ ಅಥವಾ ಕನ್ಯಾಕುಮಾರಿ ಮುಂತಾದ ಕಡೆ ನೇರ ಸಂಪರ್ಕ ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಹೊಸ ರೈಲುಗಳ ಪ್ರಾರಂಭ:
ಮುಂಬೈ-ಗದಗ ದೈನಂದಿನ ಸೂಪರ್ ಫಾಸ್ಟ್ ರೈಲು ವಿಜಯಪುರ ಮೂಲಕ ಹೊಸಪೇಡೆವರೆಗೆ ಶೀಘ್ರದಲ್ಲಿಯೇ ವಿಸ್ತರಿಸಲಾಗುವುದು. ಸೋಲಾಪುರ-ಗದಗ ಎಕ್ಸಪ್ರೆಸ್ ರೈಲು ಶೀಘ್ರದಲ್ಲಿಯೇ ಹೊಸಪೇಟೆವರೆಗೆ ವಿಸ್ತರಿಸಲಾಗುವುದು. ಮೈಸೂರು-ಸೋಲಾಪುರ ಗೋಲಗುಂಬಜ್ ಎಕ್ಸಪ್ರೆಸ್ ಶೀಘ್ರದಲ್ಲಿಯೇ ಪಂಢರಪುರದವರೆಗೆ ವಿಸ್ತರಿಸಲಾಗುವುದು.
ಇದರಿಂದ ಫಂಡರಪುರಕ್ಕೆ ದೈನಂದಿನ ರೈಲಿನ ಮೂಲಕ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನದ ಬೇಡಿಕೆ ಈಡೇರಲಿದೆ. ವಿಜಯಪುರ-ಮಂಗಳೂರ ಎಕ್ಸಪ್ರೆಸ್ ದೈನಂದಿನ ರೈಲು ಉತ್ತರ ಕರ್ನಾಟಕದಿಂದ ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ರೈಲು. ಈ ರೈಲನ್ನು ಸಾಮಾನ್ಯ ರೈಲಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ರೈಲು ವಿಜಯಪುರ ಪ್ರದೇಶದ ಪ್ರಯಾಣಿಕರಿಗೆ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮತ್ತು ಸುತ್ತಲಿನ ತರ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸಲು ಸಹಾಯ ಮಾಡಲಿದೆ. ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ಎಕ್ಸಪ್ರೆಸ್ ರೈಲು, ಹೊಸಪೇಟೆ-ಕೊಟ್ಟೂರು ಮಾರ್ಗವಾಗಿ ವಿಜಯಪುರ-ಯಶವಂತಪುರ ಎಕ್ಸಪ್ರೆಸ್ ದೈನಂದಿನ ರೈಲು ಸಹ ಸಾಮಾನ್ಯ ರೈಲಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಮುಂದುವರಿದು ವಿಜಯಪುರ ಸೋಲಾಪುರ ಮೂಲಕ ಹುಬ್ಬಳ್ಳಿ-ವಾರಣಾಸಿ ಸಾಪ್ತಾಹಿಕ ಎಕ್ಸಪ್ರೆಸ್ ರೈಲು ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದರ್ಶನ ಪಡೆಯಲು ಅಥವಾ ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಯಸುವ ಸಾವಿರಾರು ಭಕ್ತರಿಗೆ ಅಪಾರ ಸೌಲಭ್ಯ ನೀಡಿದೆ. ವಿಜಯಪುರ-ಸೋಲಾಪುರ ಮೂಲಕ ಹುಬ್ಬಳ್ಳಿ-ನಿಜಾಮುದ್ದೀನ ಸಾಪ್ತಾಹಿಕ ಭಾಗದೊಂದಿಗೆ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಹೊಂದಲು ಸಹಾಯ ಮಾಡಿದೆ ಎಂದರು.
ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಷಿ, ನಗರ ಮಾಧ್ಯಮ ಸಂಚಾಲಕ ರಾಕೇಶ ಕುಲಕರ್ಣಿ ಇದ್ದರು.