ವಿಜಯಪುರ

ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಗೋಳಾಟ ಪ್ರಕರಣ, ಇದಕ್ಕೆಲ್ಲ ಕಾರಣ ಏನು ಗೊತ್ತಾ? ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳ ಮನವಿಯಲ್ಲೇನಿದೆ? ನೋಡಿ

ವಿಜಯಪುರ: ಕಾಯಕಲ್ಪ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಘಟಿಸಿದ ಬಾಣಂತಿಯರ ನರಳಾಟ ಪ್ರಕರಣವನ್ನು ಕೆಆರ್‌ಎಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ಮಾತನಾಡಿ, ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದಲೇ ಈ ಘಟನೆ ಸಂಭವಿಸಿದೆ. ಇಲ್ಲಿರುವ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಅನುಕೂಲತೆ ಹೆಚ್ಚಿಸುವ ಸಲುವಾಗಿ ಬಹುತೇಕ ಔಷಧಿಗಳನ್ನು ಹೊರಗಡೆ ಬರೆದುಕೊಡುವ, ಬೇರೆ ಆಸ್ಪತ್ರೆಗೆ ಕಳುಹಿಸುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಆದರೂ ಜಿಲ್ಲಾಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದರು.
ಕಳೆದ ಎರಡು ಬಾರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಲಂಚಮುಕ್ತ ಅಭಿಯಾನ ಕಾರ್ಯಕ್ರಮ ಕೈಗೊಳ್ಳುವುದರ ಮೂಲಕ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯಗಳು ಒದಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಕುಂದುಕೊರತೆ ಆಲಿಸಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ನಮ್ಮ ಮನವಿಯ ನಂತರ ಸ್ವಲ್ಪ ದಿನಗಳವರೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರ್ತವ್ಯ ಪಾಲನೆ ಮಾಡಿ ನಂತರದಲ್ಲಿ ಬ್ರಿಟಿಷ್ ವೈದ್ಯಕೀಯ ಮನಃಸ್ಥಿತಿಯ ಭ್ರಷ್ಟಾಚಾರದ ಚಾಳಿಯನ್ನು ಮುಂದುವರಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರ ಘಟಕದ ಅಧ್ಯಕ್ಷ ಹಮೀದ ಇನಾಮದಾರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅರ್ಜುಣಗಿ, ಚಡಚಣ ತಾಲೂಕು ಅಧ್ಯಕ್ಷ ರಾಕೇಶ್ ಇಂಗಳಗಿ, ಸಿಂದಗಿ ತಾಲೂಕು ಅಧ್ಯಕ್ಷ ಪುಂಡಲಿಕ ಬಿರಾದಾರ, ರಮೇಶ ದೊಡ್ಡಮನಿ ಮತ್ತಿತರರಿದ್ದರು.

error: Content is protected !!