ಎಸ್‌ಎಸ್‌ಎಲ್‌ಸಿ ಟಾಪರ್ಸ್ ಟೂರ್ ಸಕ್ಸೆಸ್, ಇಲ್ಲಿದೆ ಪ್ರವಾಸದ ಡಿಟೇಲ್ಸ್ !
ಸರಕಾರ ನ್ಯೂಸ್ ವಿಜಯಪುರ
ಜಿಪಂ ಸಿಇಒ ರಾಹುಲ್ ಶಿಂಧೆ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ’ಎಸ್‌ಎಸ್‌ಎಲ್‌ಸಿ ಟಾಪರ್ಸ್ ಟೂರ್’ ಕಾರ್ಯಕ್ರಮ ಯಶಸ್ವಿಯಾಗಿದ್ದು, ನಾಲ್ಕು ದಿನಗಳ ಕಾಲ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮಹತ್ತರ ಅನುಭವ ತಮ್ಮದಾಗಿಸಿಕೊಂಡರು.
ಜೂ.1 ರಂದು ವಿಜಯಪುರ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನರ ಹಾಗೂ ಸಿಇಒ ರಾಹುಲ್ ಶಿಂಧೆ ಪ್ರವಾಸಕ್ಕೆ ಚಾಲನೆ ನೀಡಿದ್ದರು. ಜೂ.2ರಂದು ಬೆಂಗಳೂರಿನ ಪ್ರಸಿದ್ಧ ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್‌ಸಿ) ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ )ಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರೊಡನೆ ಮತ್ತು ಅಲ್ಲಿನ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಸಂಸ್ಥೆಯಲ್ಲಿ ಲಭ್ಯವಿರುವ ಅವಕಾಶಗಳು, ವಿದ್ಯಾರ್ಥಿಗಳು ಈ ಸಂಸ್ಥೆಗೆ ಸೇರಲು ಇರುವ ಮಾರ್ಗಸೂಚಿಗಳ ಮಾಹಿತಿ ಪಡೆದುಕೊಂಡರು.
ಸಂಸ್ಥೆಯ ಆವರಣದ ಜೀವಿ ಶಾಸ್ತ್ರ ವಿಭಾಗ, ಏರೋ ಸ್ಪೇಸ್ ವಿಭಾಗ ಸೇರಿ ಹಲವು ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕೀಟ ಶಾಸ್ತ್ರ ಒಳಗೊಂಡಂತೆ ವಿವಿಧ ವಿಭಾಗಗಳಿಗೆ ಭೇಟಿ ಕೊಟ್ಟು, ರೇಷ್ಮೆ ಹುಳು ಸಾಕಾಣಿಕೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ತೋಟಗಾರಿಕೆ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿಯ ಶಾಸ್ತ್ರಜ್ಞರೊಡನೆ ಸಮಾಲೋಚಿಸಿ ವಿವಿಧ ತಳಿಯ ಬೆಳೆ ಪದ್ಧತಿ, ಕೀಟ ಶಾಸ್ತ್ರ ವಿಭಾಗದಲ್ಲಿ ಸಂಗ್ರಹಿಸಲಾದ ವಿವಿಧ ತರಹದ ಕೀಟಗಳ ಮಾಹಿತಿ ವಿವರ ಪಡೆದರು. ಜೇನುಹುಳು ಸಾಕಾಣಿಕೆ ಮಹತ್ವ, ಮಾನವನಿಗೆ ಹೇಗೆ ಕೀಟಗಳು ಸ್ಪರ್ಧೆ ನೀಡುತ್ತವೆ ಎಂಬಿತ್ಯಾದಿ ವಿವರ ತಿಳಿದುಕೊಂಡರು.
ಜೂ.3 ರಂದು ನೆಹರು ತಾರಾಲಯ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ವಿಧಾನಸೌಧಕ್ಕೆ ಭೇಟಿ ನೀಡಿದರು. ಮೆಟ್ರೋ ಪ್ರಯಾಣದ ಅನುಭವ ಪಡೆದರು.
ವಿಜ್ಞಾನ ಕ್ಷೇತ್ರದ ಮಾಹಿತಿ:
ನೆಹರು ತಾರಾಲಯದಲ್ಲಿ ವಿಜ್ಞಾನ ಉದ್ಯಾನವನ, ನೆಹರು ತಾರಾಲಯದ ಸಿಬ್ಬಂದಿಗಳೊಡನೆ ಸಮಾಲೋಚಿಸಿ ವಿಜ್ಞಾನ ಕುರಿತಾದ ಮಾಹಿತಿ ಪಡೆದು. ಗಗನಯಾನದ ಸಿದ್ಧತೆ ಕುರಿತು ಚರ್ಚಿಸಿದರು. ನೆಹರು ತಾರಾಲಯದ 360% ಆಯಾಮದ ಚಿತ್ರಮಂದಿರಲ್ಲಿ ಗಗನಯಾನದ ಕುರಿತುಚಿತ್ರ ವೀಕ್ಷಿಸಿದರು. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಐಎಎಸ್ ಅಧಿಕಾರಿಗಳಾದ ಬಿ.ಬಿ. ಕಾವೇರಿ ಅವರೊಂದಿಗೆ ಸಂವಾದ ನಡೆಸಿದರು.
ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಐಎಎಸ್ ಅಧಿಕಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾ ನಾಗ್ ಅವರ ಕಾರ್ಯಾಲಯಕ್ಕೆ ತೆರಳಿ ಸಂವಾದ ನಡೆಸಿದರು. ಐಎಎಸ್ ಪರೀಕ್ಷೆ ಭಾಷಾ ಆಯ್ಕೆ, ಸಿದ್ಧತೆ ಕುರಿತು ವಿದ್ಯಾರ್ಥಿಗಳು ಕೇಳಿ ಮಾಹಿತಿ ಪಡೆದುಕೊಂಡರು. ಕನ್ನಡದಲ್ಲಿಯೇ ಬರೆದ ಸಾಧಕರ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ವಿಧಾನ ಸೌಧ ಭೇಟಿ:
ವಿಧಾನಸೌಧಕ್ಕೆ ಭೇಟಿ ನೀಡಿ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯಾಲಯ, ಅಧಿವೇಶನ ನಡೆಯುವ ಸ್ಥಳ, ಸಚಿವರ ಕಾರ್ಯಾಲಯ ಹೀಗೆ ವಿಧಾನಸೌಧದ ಎಲ್ಲ ಮಹಡಿಗಳನ್ನು ವೀಕ್ಷಣೆ ಮಾಡಿ ಸಂತೋಷಪಟ್ಟರು. ನಂತರ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯ ಬಳಿ ಫೋಟೋ ತೆಗೆಸಿಕೊಂಡು ಮಕ್ಕಳು ಸಂಭ್ರಮಿಸಿದರು.
ಜೂ.4ರಂದು ವಿಜಯಪುರದ ಉಪನಿರ್ದೇಶಕರು (ಆಡಳಿತ) ಅವರ ಕಾರ್ಯಾಲಯಕ್ಕೆ ಆಗಮಿಸಿದರು. ಪ್ರವಾಸದ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗ್ರುಪ್ ಫೋಟೊ ಇರುವ ಸ್ಮರಣಿಕೆ ನೀಡಿ ಎಲ್ಲ ಮಕ್ಕಳನ್ನು ಅವರ ಪಾಲಕರೊಂದಿಗೆ ಬೀಳ್ಕೊಡಲಾಯಿತು.